ಗೋರಖ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಗೋರಖ್‌ಪುರದಲ್ಲಿ ಮೊದಲ ಹಂತದ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದರು. ಇದೇ ಸಂದರ್ಭದಲ್ಲಿ, ಜನರಿಗೆ ತಮ್ಮ ಪುರಸಭೆಯನ್ನು ಸಶಕ್ತಗೊಳಿಸಲು ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು.
"2023ರ ಮುನ್ಸಿಪಲ್ ಚುನಾವಣೆ ಪ್ರಯುಕ್ತ ಗೋರಖ್‌ಪುರದಲ್ಲಿ ಮತ ಚಲಾಯಿಸಿದ್ದೇನೆ. ಮತದಾನ ನಮ್ಮ ಹಕ್ಕು ಮತ್ತು ಮುಖ್ಯ ಕರ್ತವ್ಯವೂ ಹೌದು. ನಿಮ್ಮ ಪುರಸಭೆಯನ್ನು ಇನ್ನಷ್ಟು ಸದೃಢಗೊಳಿಸಲು ನೀವೂ ಸಹ ಮತ ಚಲಾಯಿಸಬೇಕು. ಭಾರತಕ್ಕೆ ಜಯವಾಗಲಿ" ಎಂದು ಸಿಎಂ ಯೋಗಿ ಟ್ವೀಟ್ ಮಾಡಿದ್ದಾರೆ.
ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬಿಗಿ ಭದ್ರತೆಯ ನಡುವೆ ರಾಜ್ಯದಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಉತ್ತರ ಪ್ರದೇಶದ ಒಟ್ಟು 37 ಜಿಲ್ಲೆಗಳಲ್ಲಿ 1ನೇ ಹಂತದ ನಗರ ಪಾಲಿಕೆ ಚುನಾವಣೆಯಲ್ಲಿ ಜನರು ಮತ ಚಲಾಯಿಸಲಿದ್ದಾರೆ. 7,593 ಅಭ್ಯರ್ಥಿಗಳು ಕಣದಲ್ಲಿದ್ದು 2.4 ಕೋಟಿಗೂ ಹೆಚ್ಚು ಮತದಾರರಿದ್ದಾರೆ. 23,617 ಮತಗಟ್ಟೆಗಳಿವೆ. 9 ವಿಭಾಗಗಳು ಮತ್ತು 10 ಮುನ್ಸಿಪಲ್ ಕಾರ್ಪೊರೇಷನ್‌ಗಳ 37 ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ" ಎಂದು ತಿಳಿಸಿದರು.