ಅಲಿಗಢ (ಉತ್ತರ ಪ್ರದೇಶ):ಇಲ್ಲಿನಇಗ್ಲಾಸ್‌ನ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ರಾಷ್ಟ್ರಗೀತೆ ಹಾಡಲು ಮತ್ತು ಭಾರತ ಮಾತೆ ಹಾಗೂ ಸರಸ್ವತಿ ದೇವಿಯ ಫೋಟೋಗಳಿಗೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿರುವ ಆರೋಪ ಕೇಳಿಬಂದಿದೆ. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಶಿಕ್ಷಕನ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ನಿನ್ನೆ ನಡೆದ 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇಗ್ಲಾಸ್‌ನ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಈ ಕುರಿತಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಸ್ಮುದ್ದೀನ್ ಎಂಬ ಶಿಕ್ಷಕ ಈ ರೀತಿಯ ವರ್ತನೆ ತೋರಿದ್ದಾರೆ ಎನ್ನಲಾಗಿದೆ. "ನಮ್ಮ ಧರ್ಮವು ಅಲ್ಲಾನ ಮುಂದೆ ಮಾತ್ರ ತಲೆಬಾಗಲು ಅವಕಾಶ ನೀಡುತ್ತದೆ. ಹಾಗಾಗಿ, ಬೇರೆ ಯಾವುದಕ್ಕೂ ನಾನು ತಲೆಬಾಗುವುದಿಲ್ಲ. ರಾಷ್ಟ್ರಗೀತೆ ಹಾಡುವುದಿಲ್ಲ" ಎಂದು ಅವರು ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಇತರೆ ಶಿಕ್ಷಕರು ಹಸ್ಮುದ್ದೀನ್ ಮನವೊಲಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ಕುರಿತು ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಸತ್ಯೇಂದ್ರ ಸಿಂಗ್ ಅವರು ಪ್ರತಿಕ್ರಿಯಿಸಿ, "ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ತನಿಖೆಗೆ ಆದೇಶ ನೀಡಿದ್ದು, ವರದಿ ಬಂದರೆ ಕೂಡಲೇ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:7 ಗಂಟೆಗಳಲ್ಲಿ 75 ಸಲ ರಾಷ್ಟ್ರಗೀತೆ ಹಾಡಿ ವಿಶ್ವ ದಾಖಲೆ ಬರೆದ ತೆಲಂಗಾಣದ ಯುವತಿ!
ರಾಷ್ಟ್ರಗೀತೆ ಗೌರವಿಸುವುದು ಭಾರತೀಯನ ಕರ್ತವ್ಯ: ನಮಗೆಲ್ಲರಿಗೂ ಒಂದೇ ಒಂದು ರಾಷ್ಟ್ರೀಯತೆ ಇದೆ. ಅದು ಭಾರತೀಯತೆ. ಹೀಗಾಗಿ, ರಾಷ್ಟ್ರಗೀತೆ ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ದೇಶವನ್ನು ಒಗ್ಗಟ್ಟಿನಲ್ಲಿಡಲು ನಾವೆಲ್ಲ ಒಂದೇ, ಭಾರತೀಯರು ಎಂಬ ಭಾವನೆ ಮೂಡಬೇಕು. ಆ ಕಾರಣಕ್ಕೆ ರಾಷ್ಟ್ರಗೀತೆಯನ್ನು ಮೊಟಕುಗೊಳಿಸದಂತೆ ಹಾಡಬೇಕು ಎಂದು ಸರ್ಕಾರದ ಆದೇಶವಿದೆ. ಸಂವಿಧಾನದಲ್ಲಿ ಹೇಳಲಾಗಿರುವ ನಾಗರಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು, ಸಂವಿಧಾನವನ್ನು ಅನುಸರಿಸುವುದು ಹಾಗೂ ಸಂವಿಧಾನದ ಆದರ್ಶಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದಕ್ಕೆ ಸಂಬಂಧಿಸಿದಂತಹ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿರುತ್ತದೆ. ಒಂದೊಮ್ಮೆ ಸರ್ಕಾರ ಆದೇಶ ಸಮರ್ಪಕವಾಗಿ ಪಾಲನೆ ಆಗದಿದ್ದರೆ ಕ್ರಮ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕಿದೆ.
ಇದನ್ನೂ ಓದಿ:ಶಾಲಾ ಕಾಲೇಜುಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಗಾಯನ ಕಡ್ಡಾಯ: ಸರ್ಕಾರದ ಆದೇಶ
ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಗೀತೆ ಗಾಯನ ಕಡ್ಡಾಯ: ಕರ್ನಾಟಕದ ಎಲ್ಲಾ ಸರ್ಕಾರಿ ಮತ್ತು ನೋಂದಾಯಿತ ಖಾಸಗಿ, ಅನುದಾನಿತ, ಅನುದಾನರಹಿತ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತಿದಿನ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ರಾಷ್ಟ್ರಗೀತೆ ಹಾಡಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಕಳೆದ ವರ್ಷವೇ ಆದೇಶ ಹೊರಡಿಸಿದೆ. ಜೊತೆಗೆ, ಯಾವುದೇ ಕಾರಣಕ್ಕೂ ರಾಷ್ಟ್ರಗೀತೆಗೆ ಅಪಚಾರ ಆಗದಂತೆ ನೋಡಿಕೊಳ್ಳುವಂತೆಯೂ ಸೂಚಿಸಲಾಗಿದೆ. ಆದರೂ ಕೆಲ ರಾಜ್ಯಗಳಲ್ಲಿ ಶಿಕ್ಷಕರು ತಮ್ಮ ಮೊಂಡುತನ ಪ್ರದರ್ಶಿಸುತ್ತಿರುವುದು ಕಂಡುಬರುತ್ತಿದೆ.