ಲಕ್ನೋ (ಉತ್ತರ ಪ್ರದೇಶ): ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದ ಕಳೆದ 24 ಗಂಟೆಗಳ ಅವಧಿಯಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ನಿರಂತರ ಮಳೆಯಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಕೆಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಾಜ್ಯದ ಕೆಲವೆಡೆ ಮೇಲ್ಛಾವಣಿ ಕುಸಿತ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿವೆ. ರಾಜಧಾನಿ ಲಕ್ನೋದ ಕೆಲವು ಪ್ರದೇಶಗಳು ಜಲಾವೃತಗೊಂಡಿವೆ. ಬಾರಾಬಂಕಿಯಲ್ಲಿ ರೈಲು ಹಳಿಗಳು ಜಲಾವೃತಗೊಂಡಿತು. ಹರ್ದೋಯಿಯಲ್ಲಿ ನಾಲ್ಕು ಮಂದಿ, ಬಾರಾಬಂಕಿಯಲ್ಲಿ ಮೂವರು, ಪ್ರತಾಪ್‌ಗಢ ಮತ್ತು ಕನೌಜ್‌ನಿಂದ ತಲಾ ಇಬ್ಬರು ಹಾಗೂ ಅಮೇಥಿ, ಡಿಯೋರಿಯಾ, ಜಲೌನ್, ಕಾನ್ಪುರ್, ಉನ್ನಾವ್, ಸಂಭಾಲ್, ರಾಂಪುರ ಮತ್ತು ಮುಜಾಫರ್‌ನಗರ ಜಿಲ್ಲೆಗಳಲ್ಲಿ ತಲಾ ಒಬ್ಬರು ಮಳೆ ಸಂಬಂಧಿ ಅವಘಡದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರಾಜ್ಯದ 22 ಜಿಲ್ಲೆಗಳಲ್ಲಿ (ಮೊರಾದಾಬಾದ್, ಸಂಭಾಲ್, ಕನೌಜ್, ರಾಂಪುರ, ಹತ್ರಾಸ್, ಬಾರಾಬಂಕಿ, ಕಾಸ್ಗಂಜ್, ಬಿಜ್ನೋರ್, ಅಮ್ರೋಹಾ, ಬಹ್ರೈಚ್, ಲಕ್ನೋ, ಬದೌನ್, ಮೈನ್‌ಪುರಿ, ಹರ್ದೋಯಿ, ಫಿರೋಜಾಬಾದ್, ಬರೇಲಿ, ಶಹಜಹಾನ್‌ಪುರ್, ಕಾನ್ಪುರ್, ಸೀತಾಪುರ್, ಫರೂಕಾಬಾದ್, ಲಖಿಂಪುರ ಖೇರಿ ಮತ್ತು ಫತೇಪುರ್) ಕಳೆದ 24 ಗಂಟೆಗಳಲ್ಲಿ 40 ಮಿ.ಮೀ ಮಳೆ ಸುರಿದಿದೆ.
ಸರ್ಕಾರದ ವಿರುದ್ಧ ವಾಗ್ದಾಳಿ:ಸ್ಮಾರ್ಟ್ ಸಿಟಿಗಳಿಗೆ ಮೀಸಲಾದ ಬಜೆಟ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದರು. ಲಕ್ನೋದಲ್ಲಿನ ಜಲಮಂಡಳಿಯು ಬಿಜೆಪಿ ಸರ್ಕಾರದ ಖಾಲಿ ಭರವಸೆಗಳನ್ನು ಬಹಿರಂಗಪಡಿಸಿದೆ ಎಂದು ವಾಗ್ದಾಳಿ ನಡೆಸಿದರು. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಬಿಜೆಪಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ. ಬಜೆಟ್‌ನಲ್ಲಿ ಭ್ರಷ್ಟಾಚಾರ ಮತ್ತು ಲೂಟಿ ಈ ಪರಿಸ್ಥಿತಿ ಕಾರಣ ಎಂದು ಅವರು ದೂರಿದರು.
ಭಾರಿ ಮಳೆ ಮುನ್ಸೂಚನೆ:ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಪೂರ್ವ ವಲಯದಲ್ಲಿ ಸೆ.14 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಸೆ.17 ರವರೆಗೆ ಲಘು ಮಳೆ ಮುಂದುವರೆಯುತ್ತದೆ ಎಂದು ಪರಿಹಾರ ಆಯುಕ್ತರ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ. ರಾಜ್ಯದ ಪಶ್ಚಿಮ ಭಾಗದಲ್ಲೂ ಸೆ.17 ರವರೆಗೆ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಲಕ್ನೋದಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷೇತ್ರದಲ್ಲಿದ್ದು, ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಅವಲೋಕನ ನಡೆಸುತ್ತಿದ್ದಾರೆ. ರಾಜ್ಯ ರಾಜಧಾನಿಯ ವಿವಿಧ ಭಾಗಗಳು ಜಲಾವೃತಗೊಂಡಿದ್ದು, ತುರ್ತು ಆಧಾರದ ಮೇಲೆ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂರ್ಯ ಪಾಲ್ ಗಂಗ್ವಾರ್ ಹೇಳಿದರು. ನಗರ ಪ್ರದೇಶದಲ್ಲಿ ಮಹಾನಗರ ಪಾಲಿಕೆ ತಂಡ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉಪವಿಭಾಗಾಧಿಕಾರಿಗಳ ನೇತೃತ್ವದ ತಂಡಗಳು ಕ್ಷೇತ್ರದಲ್ಲಿದ್ದು ಜನರ ಸಮಸ್ಯೆಗಳನ್ನು ಪರಿಹರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಎನ್‌ಎಟಿ ಪರೀಕ್ಷೆ ಮುಂದೂಡಿಕೆ:ಭಾನುವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ನಗರ ಮತ್ತು ಗ್ರಾಮೀಣ ಪ್ರದೇಶಗಳು ಪ್ರಮುಖ ಮಾರ್ಗಗಳು ಮತ್ತು ಸಮೀಪ ರಸ್ತೆಗಳಲ್ಲಿ ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಸಾಮರ್ಥ್ಯ ಪರೀಕ್ಷೆ (ಎನ್‌ಎಟಿ) ಮುಂದೂಡಲಾಗುವುದು ಎಂದು ಲಖಿಂಪುರ ಶಿಕ್ಷಣಾಧಿಕಾರಿ (ಬಿಎಸ್‌ಎ) ಪ್ರವೀಣ್ ತಿವಾರಿ ತಿಳಿಸಿದ್ದಾರೆ.
ಪರಿಹಾರ ಕಾರ್ಯ ಕೈಗೊಳ್ಳುವಂತೆ ಸಿಎಂ ಸೂಚನೆ:ಮೂಲಗಳ ಪ್ರಕಾರ, ರಾಜ್ಯದ 173 ಹಳ್ಳಿಗಳ 55,982 ಜನರು ಮಳೆ ಸಂಬಂಧಿ ಅವಘಡದಲ್ಲಿ ಸಿಲುಕಿದ್ದಾರೆ. ಸದ್ಯ ರಾಜ್ಯದಲ್ಲಿ ಯಾವುದೇ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿಲ್ಲ. ಆದರೆ ಬಿಜ್ನೋರ್‌ನಲ್ಲಿ ಗಂಗಾ ಮತ್ತು ಮಿರ್ಜಾಪುರದ ಸೋನ್ ನದಿ (ಬನ್‌ಸಾಗರ್ ಅಣೆಕಟ್ಟು) ನೀರಿನ ಮಟ್ಟ ಏರುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ್ರಸ್ತ ಜಿಲ್ಲೆಗಳ ಅಧಿಕಾರಿಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಬೆಳೆಗಳಿಗೆ ಆಗಿರುವ ಹಾನಿಯನ್ನು ಅಂದಾಜಿಸಿ ಸರ್ಕಾರಕ್ಕೆ ವರದಿ ನೀಡಬೇಕು. ಇದರಿಂದ ಸಂತ್ರಸ್ತ ರೈತರಿಗೆ ನಿಯಮಾನುಸಾರ ಪರಿಹಾರದ ಮೊತ್ತವನ್ನು ನೀಡಬಹುದು ಎಂದು ಅಧಿಕಾರಿ ಸಿಎಂ ಅವರನ್ನು ಉಲ್ಲೇಖಿಸಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಜಿ20 ಶೃಂಗಸಭೆ ನಡೆದ 'ಭಾರತ ಮಂಟಪ'ಕ್ಕೆ ನುಗ್ಗಿದ ಮಳೆ ನೀರು, ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ