ಮಥುರಾ(ಉತ್ತರ ಪ್ರದೇಶ):ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಮುಖ ಮುಖಂಡರು ಅಖಾಡಕ್ಕಿಳಿದು ಪ್ರಚಾರ ನಡೆಸುತ್ತಿದ್ದಾರೆ. ಆಡಳಿತ ಪಕ್ಷ ಬಿಜೆಪಿ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನೆ ಮನೆ ಪ್ರಚಾರ ನಡೆಸಿದ್ದು, ಇಂದು ಮಥುರಾ ಸೇರಿದಂತೆ ಅನೇಕ ಕಡೆ ಮತಯಾಚನೆ ಮಾಡಿದರು.
ಪ್ರಚಾರದ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅಮಿತ್ ಶಾ, ಪ್ರತಿಪಕ್ಷದ ನಾಯಕರನ್ನ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಿಂದ ಭಾರತದ ಭವಿಷ್ಯ ನಿರ್ಧಾರವಾಗಲಿದೆ. ಈ ಹಿಂದೆ ಇಲ್ಲಿ ಆಡಳಿತ ನಡೆಸಿರುವ ವಿವಿಧ ಪಕ್ಷಗಳಿಂದ ರಾಜ್ಯ ಸಂಪೂರ್ಣವಾಗಿ ಹಿಂದುಳಿದಿದೆ ಎಂದರು.
ಇದನ್ನೂ ಓದಿರಿ:ಪದ್ಮಶ್ರೀ ತಿರಸ್ಕರಿಸಿದ ಬಂಗಾಳದ ಗಾಯಕಿ ಸಂಧ್ಯಾ ಮುಖರ್ಜಿ ಆಸ್ಪತ್ರೆಗೆ ದಾಖಲು
ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿರುವ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಈ ರಾಜ್ಯವನ್ನ ಜಂಗಲ್ ರಾಜ್ ಮಾಡಿದ್ದಾರೆ. ಇದೇ ಕಾರಣದಿಂದಾಗಿ ಬಡವರು ಹಿಂದುಳಿದಿದ್ದಾರೆ. ಯೋಗಿ ಸರ್ಕಾರವನ್ನ ಮತ್ತೊಮ್ಮೆ ಅಧಿಕಾರಕ್ಕೆ ತರುವಂತೆ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದಿರುವ ಶಾ, ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ ಕೈಗೊಳ್ಳಿ ಎಂದು ಮನವಿ ಮಾಡಿದರು.
ಮುಂದಿನ ಐದು ವರ್ಷಗಳ ಕಾಲ ಯಾವ ಪಕ್ಷ ಇಲ್ಲಿ ಅಧಿಕಾರ ನಡೆಸಬೇಕೆಂಬುದನ್ನ ನಿರ್ಧಾರ ಮಾಡುವುದು ನಿಮ್ಮ ಕೈಯಲ್ಲಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಕೇವಲ ಒಂದು ಜಾತಿಯಾಗಿ ಕೆಲಸ ಮಾಡಿವೆ. ಆದರೆ, ಕಳೆದ ಐದು ವರ್ಷಗಳಿಂದ ಬಿಜೆಪಿ ಎಲ್ಲರ ಅಭಿವೃದ್ಧಿಗೋಸ್ಕರ ಶ್ರಮಿಸಿದೆ. ಬಿಜೆಪಿ ಕೇವಲ ಒಂದು ಜಾತಿಯ ಪಕ್ಷವಾಗಿ ಇಲ್ಲಿ ಕೆಲಸ ಮಾಡ್ತಿಲ್ಲ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಉತ್ತರ ಪ್ರದೇಶದ ದಾದ್ರಾ, ಗೌತಮ್ ಬುದ್ಧ ನಗರದಲ್ಲೂ ಅಭ್ಯರ್ಥಿಗಳ ಪರ ಪ್ರಚಾರ ಅಮಿತ್ ಶಾ ಪ್ರಚಾರ ನಡೆಸಿದರು.
ಉತ್ತರ ಪ್ರದೇಶದ 403 ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಫೆ. 10ರಿಂದ ಮೊದಲನೇ ಹಂತದ ವೋಟಿಂಗ್ ಆರಂಭವಾಗಲಿದೆ. ಇದಕ್ಕೋಸ್ಕರ ಈಗಾಗಲೇ ಎಲ್ಲ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿವೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ