ಲಖನೌ(ಉತ್ತರ ಪ್ರದೇಶ):ಕರ್ನಾಟಕದ ಚಾಮರಾಜನಗರಕ್ಕೆ ಭೇಟಿ ನೀಡಿದ್ರೆ, ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತಾರೆಂಬ ಮೂಢನಂಬಿಕೆಯಂತೆ ಉತ್ತರ ಪ್ರದೇಶದ ನೋಯ್ಡಾಗೆ ಭೇಟಿ ನೀಡಿದರೂ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೂಢನಂಬಿಕೆ ಉತ್ತರ ಪ್ರದೇಶದಲ್ಲಿ ಜನಜನಿತವಾಗಿತ್ತು. ಅದನ್ನೀಗ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸುಳ್ಳು ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2022ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ದಾಖಲು ಮಾಡುವ ಮೂಲಕ ಬಹುದೊಡ್ಡ ಮೂಢನಂಬಿಕೆಯನ್ನು ಸುಳ್ಳು ಮಾಡಿದ್ದಾರೆ. ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದರೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬುದನ್ನ ಅವರು ಸಾಬೀತು ಪಡಿಸಿದ್ದಾರೆ.
ಕಳೆದ 29 ವರ್ಷಗಳಿಂದ ಉತ್ತರ ಪ್ರದೇಶದ ನೋಯ್ಡಾಗೆ ಯಾವುದೇ ಸಿಎಂ ಭೇಟಿ ನೀಡಿರಲಿಲ್ಲ. ಆದರೆ, 2018ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿಗೆ ಭೇಟಿ ನೀಡಿದ್ದರು. ಇದಾದ ಬಳಿಕ 2021ರಲ್ಲಿ ಮತ್ತೊಂದು ನೋಯ್ಡಾಗೆ ತೆರಳಿ ಕೋವಿಡ್ ಆಸ್ಪತ್ರೆ ಉದ್ಘಾಟನೆ ಮಾಡಿದ್ದರು. ತಮ್ಮ ಅಧಿಕಾರ ಅವಧಿಯಲ್ಲಿ ಯೋಗಿ ಸುಮಾರು 10ಕ್ಕೂ ಹೆಚ್ಚು ಸಲ ಇಲ್ಲಿಗೆ ಭೇಟಿ ನೀಡಿದ್ದಾರೆ. ವಿಶೇಷ ಎಂದರೆ ಈ ಹಿಂದೆ ಸಿಎಂ ಆಗಿದ್ದ ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್, ಕಲ್ಯಾಣ್ ಸಿಂಗ್ ಮತ್ತು ರಾಜನಾಥ್ ಸಿಂಗ್ ಅವರು ಯುಪಿ ಸಿಎಂ ಆಗಿದ್ದಾಗ ನೋಯ್ಡಾಕ್ಕೆ ಭೇಟಿ ನೀಡಿರಲಿಲ್ಲ.