ಕರ್ನಾಟಕ

karnataka

By

Published : Mar 11, 2022, 1:45 PM IST

Updated : Mar 11, 2022, 1:53 PM IST

ETV Bharat / bharat

ಬಿಎಸ್​ಪಿಗೆ ಶೇ.12ಕ್ಕಿಂತ ಹೆಚ್ಚು ಮತ ಬಂದರೂ ಒಂದೇ ಸ್ಥಾನದಲ್ಲಿ ಗೆಲುವು: ಮಾಯಾವತಿ ಹೇಳಿದ್ದೇನು?

ಬಿಎಸ್​ಪಿಯು ಬಿಜೆಪಿಯ ಬಿ-ಟೀಂ ಎಂದು ಅಪಪ್ರಚಾರ ಮಾಡುವ ಮೂಲಕ ಮತದಾರರ ದಾರಿ ತಪ್ಪಿಸಲಾಯಿತು. ಆದರೆ, ಈಗ ಸತ್ಯಾಂಶ ಹೊರ ಬಿದ್ದಿದೆ ಎಂದು ಮಾಯಾವತಿ ಅಭಿಪ್ರಾಯ ಪಟ್ಟಿದ್ದಾರೆ.

Mayawati
Mayawati

ಲಖನೌ (ಉತ್ತರಪ್ರದೇಶ): ಗುರುವಾರ ಹೊರಬಿದ್ದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ್ದ ಸೋಲನ್ನು ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಒಪ್ಪಿಕೊಂಡಿದ್ದು, ಈ ಚುನಾವಣೆ ನಮಗೊಂದು ಪಾಠ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ 2007ರಲ್ಲಿ ಬಹುಮತದೊಂದಿಗೆ ಅಧಿಕಾರ ನಡೆಸಿದ್ದ ಮಾಯಾವತಿ ನೇತೃತ್ವದ ಬಿಎಸ್​ಪಿ ಈ ಬಾರಿ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೀನಾಯ ಸ್ಥಿತಿಗೆ ತಲುಪಿದೆ. 2017ರ ಚುನಾವಣೆಯಲ್ಲಿ ಶೇ.22.23ರಷ್ಟು ಮತ ಪಡೆದು 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಗುರುವಾರ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಶೇ.12.88ರಷ್ಟು ಮತ ಗಳಿಕೆ ಮಾಡಿದರೂ ಪಕ್ಷ ಗೆದ್ದಿರುವುದು ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿದೆ.

ಚುನಾವಣಾ ಫಲಿತಾಂಶದ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಾಯಾವತಿ, ಈ ಫಲಿತಾಂಶದಿಂದ ಬಿಎಸ್​ಪಿ ಕಾರ್ಯಕರ್ತರು ಹತಾಶರಾಗುವುದು ಬೇಡ. ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ನಿರಂತರವಾದ ಚಳವಳಿ ನಡೆಸಬೇಕಿದೆ ಎಂದು ಕರೆ ನೀಡಿದ್ದಾರೆ.

ಬಿಎಸ್​ಪಿಯು ಬಿಜೆಪಿಯ ಬಿ - ಟೀಂ ಎಂದು ಅಪಪ್ರಚಾರ ಮಾಡುವ ಮೂಲಕ ಮತದಾರರ ದಾರಿ ತಪ್ಪಿಸಲಾಯಿತು. ಆದರೆ, ಈಗ ಸತ್ಯಾಂಶ ಹೊರ ಬಿದ್ದಿದೆ. ಬಿಎಸ್​ಪಿಗೆ ಬಿಜೆಪಿ ಎಂದಿಗೂ ವಿರೋಧಿಯೇ. ಕೇವಲ ರಾಜಕೀಯವಾಗಿಲ್ಲ. ಸೈದ್ಧಾಂತಿಕವಾಗಿಯೂ ಪರಸ್ಪರ ವಿರೋಧಿಗಳು ಎಂದು ಸ್ಪಪ್ಟಪಡಿಸಿದ್ದಾರೆ.

ಅಲ್ಲದೇ, ಉತ್ತರ ಪ್ರದೇಶದಲ್ಲಿ ನಮ್ಮ ನಿರೀಕ್ಷೆಗೆ ವಿರುದ್ಧವಾದ ಫಲಿತಾಂಶ ಬಂದಿದೆ. ಅದಕ್ಕೆ ನಾವು ಎದೆಗುಂದಬಾರದು. ಬದಲಿಗೆ ಇದರಿಂದ ಪಾಠ ಕಲಿಯಬೇಕು ಮತ್ತು ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಪ್ರಯತ್ನ ಮಾಡುತ್ತಲೇ ಇರಬೇಕು ಎಂದಿದ್ದಾರೆ.

ಅಷ್ಟೇ ಅಲ್ಲ, 2017ಕ್ಕಿಂತ ಮೊದಲು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಅದೇ ರೀತಿಯಾಗಿ ಇವತ್ತು ಕಾಂಗ್ರೆಸ್​ಗೆ ಆ ಸ್ಥಿತಿ ಬಂದಿದೆ. ಹೀಗಾಗಿ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ನಮಗೆ ಪಾಠವಾಗಿದೆ. ಚುನಾವಣೆಯಲ್ಲಿನ ನಕಾರಾತ್ಮಕ ಪ್ರಚಾರಗಳು ಮತದಾರರ ದಾರಿತಪ್ಪಿಸುವಲ್ಲಿ ಯಶಸ್ವಿಯಾಗಿವೆ ಎಂದು ಮಾಯಾವತಿ ಹೇಳಿದ್ದಾರೆ.

ಇದನ್ನೂ ಓದಿ:ದೇಶದಲ್ಲಿ ಪ್ರಾಬಲ್ಯ ವೃದ್ಧಿಸಿಕೊಂಡ ಕೇಸರಿ ಪಡೆ: ಯಾವ ರಾಜ್ಯದಲ್ಲಿ? ಯಾರ ಸರ್ಕಾರ?

Last Updated : Mar 11, 2022, 1:53 PM IST

ABOUT THE AUTHOR

...view details