ಕೈರಾನಾ(ಉತ್ತರ ಪ್ರದೇಶ): ಕೋವಿಡ್ ಮಹಾಮಾರಿ ನಡುವೆ ಘೋಷಣೆಯಾಗಿರುವ ಪಂಚ ರಾಜ್ಯಗಳ ಚುನಾವಣೆ ವಿಭಿನ್ನವಾಗಿ ನಡೆಯಲಿದ್ದು, ಅಭ್ಯರ್ಥಿಗಳು ಯಾವುದೇ ರೀತಿಯಲ್ಲೂ ಸಾರ್ವಜನಿಕ ಪ್ರಚಾರ ಸಭೆ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಹೀಗಾಗಿ, ಇದೀಗ ಮನೆ ಮನೆ ಪ್ರಚಾರ ನಡೆಸುವುದು ಎಲ್ಲ ಪಕ್ಷಗಳಿಗೆ ಅನಿವಾರ್ಯವಾಗಿದೆ.
ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದೆ. ಇದೇ ಕಾರಣಕ್ಕಾಗಿ ಇದೀಗ ಭಾರತೀಯ ಜನತಾ ಪಾರ್ಟಿ ಮನೆ ಮನೆ ಪ್ರಚಾರ ಆರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕೈರಾನಾ ಪ್ರದೇಶದಲ್ಲಿ ಪ್ರಚಾರ ಅಭಿಯಾನ ಆರಂಭಿಸಿದ್ದಾರೆ.
ಈ ವೇಳೆ ಮಾತನಾಡಿರುವ ಅಮಿತ್ ಶಾ, 2014ರಲ್ಲಿ ನಾನು ಕೈರಾನಾಗೆ ಬಂದಿದ್ದೆ. ಕಳೆದ ಐದು ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದು, ಇಲ್ಲಿನ ರಸ್ತೆ, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಸೌಲಭ್ಯಗಳು ಜನರಿಗೆ ಸಿಗುವಂತಾಗಿವೆ. ಈ ಹಿಂದಿನ ಸರ್ಕಾರಗಳು ಕೇವಲ ಕುಟುಂಬ ರಾಜಕಾರಣ ಮಾಡಿವೆ ಎಂದರು.