ಕೌಶಂಬಿ (ಉತ್ತರಪ್ರದೇಶ) :ಪೊಲೀಸ್ ಇಲಾಖೆ ಎಂದರೆ ಅಲ್ಲೊಂದು ಶಿಸ್ತು, ಸಮವಸ್ತ್ರ ಇದ್ದೇ ಇರುತ್ತೆ. ಉತ್ತರಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮದೇ ಪ್ರತ್ಯೇಕ ಸಮವಸ್ತ್ರ ಹೊಂದಿದ್ದು ಕೆಲಸದಿಂದಲೇ ಅಮಾನತಾಗಿದ್ದಾರೆ. ಅದೇನಪ್ಪಾ ಅಂದ್ರೆ, ಠಾಣೆಯಲ್ಲಿ ದೂರು ಪಡೆಯುವ ವೇಳೆ ಬನಿಯನ್ ಮತ್ತು ಟವೆಲ್ ಸುತ್ತಿಕೊಂಡಿದ್ದು, ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಇಲಾಖೆ ಸಸ್ಪೆಂಡ್ ಮಾಡಿದೆ. ಜೊತೆಗೆ ತನಿಖೆಗೆ ಆದೇಶಿಸಲಾಗಿದೆ.
ಘಟನೆಯ ವಿವರ:ಕೌಶಂಬಿ ಜಿಲ್ಲೆಯ ಕೊಖ್ರಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಘಿಯಾ ಹೊರಠಾಣೆಯ ಅಧಿಕಾರಿ ರಾಮ್ ನಾರಾಯಣ್ ಸೋಂಕರ್ ಅಮಾನತಾದವರು. ಕೌಟುಂಬಿಕ ಕಲಹದ ವಿಚಾರವಾಗಿ ಮಹಿಳೆಯರು ದೂರು ನೀಡಲು ಬಂದಾಗ ಕಚೇರಿಯ ಆಸನದ ಮೇಲೆ ಕುಳಿತಾಗ ಪೊಲೀಸ್ ಸಮವಸ್ತ್ರ ಬಿಟ್ಟು ಬನಿಯನ್ ಮತ್ತು ಟವೆಲ್ ಸುತ್ತಿಕೊಂಡು ಕುಳಿತಿದ್ದರು. ಇದನ್ನು ಯಾರೋ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಉತ್ತರಪ್ರದೇಶದಲ್ಲಿ ಪೊಲೀಸ್ ಠಾಣೆಗಳ ಜೊತೆಗೆ ಹೊರಠಾಣೆಗಳನ್ನು ನೀಡಲಾಗಿದೆ. ಜನರಿಗೆ ತಕ್ಷಣಕ್ಕೆ ಆರಕ್ಷಕ ಸೇವೆ ಸಿಗಲಿ ಎಂಬ ಉದ್ದೇಶದಿಂದ ಇವುಗಳನ್ನು ಆಯಾ ಗ್ರಾಮಗಳಲ್ಲಿ ಆರಂಭಿಸಲಾಗಿದೆ. ಅದರಲ್ಲಿ ಒಂದಾದ ಸಿಂಘಿಯಾ ಹೊರ ಠಾಣೆಗೆ ರಾಮ್ ನಾರಾಯಣ್ ಸೋಂಕರ್ ಅವರನ್ನು ಇನ್ಚಾಜ್ ಆಗಿ ನೇಮಕ ಮಾಡಲಾಗಿದೆ. ಮಹಿಳೆಯರಿಬ್ಬರು ಕೌಟುಂಬಿಕ ವಿಚಾರವಾಗಿ ದೂರು ನೀಡಲು ಬಂದಿದ್ದರು.