ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ಮಾತ್ರವಲ್ಲದೇ, ಇಡೀ ದೇಶದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿರುವ ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣ ರಾಜಕೀಯ ಕೆಸೆರೆಚಾಟಕ್ಕೆ ಕಾರಣವಾಗಿದ್ದು, ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ನಡುವೆ ಪೊಲೀಸರ ಬಂಧನದಲ್ಲಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಲು ಬಂದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರನ್ನು ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಪೊಲೀಸರು ತಡೆದಿದ್ದಾರೆ.
ಪೊಲೀಸರ ನಡೆಯನ್ನು ಖಂಡಿಸಿರುವ ಬಘೇಲ್, ವಿಮಾನ ನಿಲ್ದಾಣದ ನೆಲಮಹಡಿಯಲ್ಲೇ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಭೂಪೇಶ್ ಬಘೇಲ್ ಅವರು ಲಖನೌದಿಂದ ಸೀತಾಪುರಕ್ಕೆ ತೆರಳಿ ಬಂಧನವಾಗಿರುವ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಬೇಕಿತ್ತು. ಜೊತೆಗೆ ರೈತರ ಮೇಲೆ ಕಾರು ಹತ್ತಿಸಿ ನಾಲ್ವರು ಅನ್ನದಾತರ ಸಾವಿಗೆ ಕಾರಣವಾದ ಸ್ಥಳ ಖಲೀಂಪುರ ಖೇರಿಗೂ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದರು.
ತಮ್ಮನ್ನು ಪೊಲೀಸರು ತಡೆದಿರುವ ವಿಡಿಯೋ ಹಂಚಿಕೊಂಡಿರುವ ಅವರು, ಯಾಕೆ ತಮ್ಮನ್ನು ತಡೆದಿದ್ದೀರಿ ಎಂದು ಪೊಲೀಸ್ ಅಧಿಕಾರಿಗಳನ್ನು ಕೇಳುತ್ತಿದ್ದಾರೆ. ಲಖೀಂಪುರ್ ಖೇರಿಗೆ ಹೋಗುತ್ತಿಲ್ಲ, ಆದರೆ, ಪ್ರಿಯಾಂಕಾ ಗಾಂಧಿಯನ್ನು ಭೇಟಿ ಮಾಡಲು ಸೀತಾಪುರಕ್ಕೆ ಹೋಗಬೇಕು. ಲಖೀಂಪುರ ಖೇರಿಯಲ್ಲಿ ಮಾತ್ರ ಸೆಕ್ಷನ್ 144 ಜಾರಿಯಾಗಿದೆ. ಹೀಗಾಗಿ ನನ್ನನ್ನು ಇಲ್ಲಿ ಯಾಕೆ ತಡೆದಿದ್ದೀರಿ ಎಂತಲೂ ಪ್ರಶ್ನಿಸಿದ್ದಾರೆ.