ಲಖನೌ (ಉತ್ತರ ಪ್ರದೇಶ):ಈಗ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ಗಳಿವೆ. ಸೋಷಿಯಲ್ ಮೀಡಿಯಾ ಹಾಗೂ ಸೆಲ್ಫಿ ಫೋಟೋ ಗೀಳೂ ಸಹ ಹೆಚ್ಚಾಗಿದೆ. ಯಾವುದೇ ಫೋಟೋ ಇದ್ದರೂ ಬಹುಬೇಗ ಎಲ್ಲರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತದೆ. ಇಂಥದ್ದೊಂದು ಸೆಲ್ಫಿ ಫೋಟೋ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರನ್ನು ಇದೀಗ ಪಜೀತಿಗೆ ಸಿಲುಕಿಸಿದೆ.
ಪತ್ನಿ ಮತ್ತು ಮಕ್ಕಳ ಸೆಲ್ಫಿ ಫೋಟೋದಿಂದಾಗಿ ಆ ಪೊಲೀಸ್ ಅಧಿಕಾರಿ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದಾರೆ. ಅಲ್ಲದೇ, ತನಿಖೆಯನ್ನೂ ಎದುರಿಸುವಂತಾಗಿದೆ. ಇದಕ್ಕೆ ಕಾರಣ ಪತ್ನಿ-ಮಕ್ಕಳು ಕ್ಲಿಕ್ಕಿಸಿಕೊಂಡ ಫೋಟೋದಲ್ಲಿದ್ದ ಕಂತೆ-ಕಂತೆ 500 ರೂಪಾಯಿ ನೋಟುಗಳು. ಕುಟಂಬ ಸದಸ್ಯರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಧಿಕಾರಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.
ಸೆಲ್ಫಿ ಫೋಟೋದ ವಿವರ...: ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ರಮೇಶ್ ಚಂದ್ರ ಸಹಾನಿ ಉನ್ನಾವೋದ ಬೆಹ್ತಾ ಮುಜಾವರ್ ಪೊಲೀಸ್ ಠಾಣೆಯಲ್ಲಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಸಿಗೆಯ ಮೇಲೆ ನೋಟಿನ ಕಂತೆನೊಂದಿಗೆ ಕುಳಿತು ಸೆಲ್ಫಿ ತೆಗೆದುಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಪೊಲೀಸ್ ಅಧಿಕಾರಿ ಕುಟುಂಬಸ್ಥರು ಹಾಗೂ ಫೋಟೋಗಳಲ್ಲಿ ನೋಟಿನ ಬಂಡಲ್‌ಗಳ ಕಾರಣಕ್ಕೆ ಆ ಫೋಟೋಗಳು ತಕ್ಷಣಕ್ಕೆ ಎಲ್ಲೆಡೆ ವೈರಲ್ ಆಗಿವೆ.