ಕಾನ್ಪುರ (ಉತ್ತರ ಪ್ರದೇಶ): ಗ್ಯಾಂಗ್ಸ್ಟರ್ ವಿಕಾಸ್ ದುಬೆ ಮತ್ತು ಆತನ ಐವರು ಸಹಚರರ ಎನ್ಕೌಂಟರ್ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರಿಗೆ ನ್ಯಾ.ಬಿ.ಎಸ್.ಚೌಹಾಣ್ ವಿಚಾರಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.
ಪ್ರಕರಣದಲ್ಲಿ ಪೊಲೀಸರು ತಪ್ಪಿತಸ್ಥರೆನ್ನಲು ಸೂಕ್ತವಾದ ಪುರಾವೆಗಳಿಲ್ಲ. ಎರಡು ತಿಂಗಳ ಕಾಲ ನಡೆದ ವಿಚಾರಣೆ ಸಮಯದಲ್ಲಿ ಎನ್ಕೌಂಟರ್ ನಕಲಿ ಎಂಬುದಕ್ಕೆ ಸಾಕ್ಷ್ಯ ಸಿಕ್ಕಿಲ್ಲ ಎಂದು ಆಯೋಗ ಹೇಳಿದೆ.
ಇದನ್ನೂ ಓದಿ:ಮೋಸ್ಟ್ ವಾಂಟೆಡ್ ವಿಕಾಸ್ ದುಬೆ ಹೆಸರು ಕಾನ್ಪುರದ 'ಟಾಪ್ 15' ಅಪರಾಧಿಗಳ ಪಟ್ಟಿಯಲ್ಲೇ ಇಲ್ಲ!
ಜುಲೈ 2, 2020 ರ ರಾತ್ರಿ, ಚೌಬೆಪುರ ಪೊಲೀಸ್ ಠಾಣೆ ಪ್ರದೇಶದ ಬಿಕಾರು ಗ್ರಾಮದ ಮೇಲೆ ದಾಳಿ ನಡೆಸಿದ ಪೊಲೀಸ್ ತಂಡದ ಮೇಲೆ ವಿಕಾಸ್ ದುಬೆ ಮತ್ತು ಆತನ ಸಹಚರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ 8 ಪೊಲೀಸರು ಹತರಾಗಿದ್ದರು. ನಂತರ, ಆತನ ನಾಲ್ವರು ಸಹಚರರನ್ನು ಪೊಲೀಸರು ಸದೆಬಡಿದರು. ಈ ಸಂದರ್ಭದಲ್ಲಿ ಮುಖ್ಯ ಆರೋಪಿ ವಿಕಾಸ್ ದುಬೆ ಪರಾರಿಯಾಗಿದ್ದ.
ಜುಲೈ 9, 2020 ರಂದು ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ಮಧ್ಯಪ್ರದೇಶ ಪೊಲೀಸರು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ:ಎನ್ಕೌಂಟರ್ನಲ್ಲಿ ಬಲಿಯಾದ ವಿಕಾಸ್ ದುಬೆ ಕ್ರಿಮಿನಲ್ ಇತಿಹಾಸ ಭಯಾನಕ..!
ಆರೋಪಿಯನ್ನು ಕಾನ್ಪುರಕ್ಕೆ ಕರೆತರುವ ವೇಳೆ ಪೊಲೀಸರ ಬೆಂಗಾವಲು ವಾಹನ ಮಗುಚಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ಪರಾರಿಯಾಗಲು ಯತ್ನಿಸಿದ ವಿಕಾಸ್ ದುಬೆ ಎನ್ಕೌಂಟರ್ನಿಂದ ಸಾವನ್ನಪ್ಪಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಹೇಳಿದ್ದರು.