ಕಾಶಿಪುರ (ಉತ್ತರಾಖಂಡ): ಉತ್ತರಾಖಂಡನ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಭಾರಿ ದುರಂತ ನಡೆದಿದೆ. ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ನಿವಾಸದ ಮೇಲೆ ಉತ್ತರ ಪ್ರದೇಶ ಪೊಲೀಸರು ಬುಧವಾರ ಸಂಜೆ ದಾಳಿ ನಡೆಸಿದ್ದಾರೆ. ಪೊಲೀಸರ ಈ ದಾಳಿ ವೇಳೆ ಬಿಜೆಪಿ ಮುಖಂಡನ ಪತ್ನಿ ಸಾವನ್ನಪ್ಪಿದ್ದು, ಪೊಲೀಸ್ ಗುಂಡೇಟಿನಿಂದಲೇ ಇವರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ, ಗ್ರಾಮಸ್ಥರು ಪೊಲೀಸ್ ತಂಡವನ್ನು ಥಳಿಸಿದ್ದು, ಮೂವರು ಪೊಲೀಸರ ಸೇರಿದಂತೆ ಜನರು ಗಾಯಗೊಂಡಿದ್ದಾರೆ.
ಇಲ್ಲಿನ ಜಸ್ಪುರ್ನ ಬಿಜೆಪಿ ಬ್ಲಾಕ್ ಮುಖ್ಯಸ್ಥ ಗುರುತಾಜ್ ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಭುಲ್ಲಾರ್ ಎಂಬುವವೇ ಮೃತರು. ಈ ಸಾವಿನಿಂದ ಆಕ್ರೋಶಗೊಂಡ ಸುಮಾರು 400 ಗ್ರಾಮಸ್ಥರು ಕುಂದಾ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದಾರೆ. ಇದರ ನಡುವೆ ಗುರುವಾರ ಸಂಜೆ ಗುರುಪ್ರೀತ್ ಅವರ ಅಂತ್ಯಕ್ರಿಯೆ ನೆರವೇರಿದೆ. ಐದು ವರ್ಷದ ಮಗಳು ಮತ್ತು ನಾಲ್ಕು ತಿಂಗಳ ಗಂಡು ಮಗುವನ್ನು ಗುರುಪ್ರೀತ್ ಅಗಲಿದ್ದಾರೆ.
ಇಷ್ಟಕ್ಕೂ ನಡೆದಿದ್ದು ಏನು?:ಉತ್ತರ ಪ್ರದೇಶದಲ್ಲಿ ಮೈನಿಂಗ್ ಮಾಫಿಯಾದಲ್ಲಿ ತೊಡಗಿಸಿಕೊಂಡಿರುವ ಆರೋಪಿಗಳು ಉತ್ತರಾಖಂಡದಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂಬ ಆರೋಪ ಇದೆ. ಇದೇ ಶಂಕೆ ಮೇಲೆ ಉತ್ತರಾಖಂಡಕ್ಕೆ ಉತ್ತರ ಪ್ರದೇಶದ ಪೊಲೀಸರು ಬಂದು ದಾಳಿ ಮಾಡುತ್ತಿದ್ದಾರೆ. ಬುಧವಾರ ಕೂಡ ಉತ್ತರ ಪ್ರದೇಶದಿಂದ ಮೊರಾದಾಬಾದ್ ಪೊಲೀಸರು ಉಧಮ್ ಸಿಂಗ್ ನಗರ ಜಿಲ್ಲೆಗೆ ಬಂದಿದ್ದಾರೆ.
ಆದರೆ, ಈ ಉತ್ತರ ಪ್ರದೇಶದ ಪೊಲೀಸರು ಸಮವಸ್ತ್ರ ಧರಿಸದೇ ಬಂದಿದ್ದರು ಹಾಗೂ ತಮ್ಮ ಆಗಮನದ ಬಗ್ಗೆ ಉತ್ತರಾಖಂಡನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಹೀಗೆ ಸಿವಿಲ್ ಡ್ರೆಸ್ ಮೇಲೆ ಬಂದಿದ್ದ ಉತ್ತರ ಪ್ರದೇಶದ ಪೊಲೀಸರು, ಕಾಶಿಪುರ ಪ್ರದೇಶದ ಭರತ್‌ಪುರ ಗ್ರಾಮದಲ್ಲಿರುವ ಬಿಜೆಪಿ ಮುಖಂಡ ಗುರುತಾಜ್ ಭುಲ್ಲರ್ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ.
ಬಿಜೆಪಿ ಮುಖಂಡ ಹೇಳಿದ್ದೇನು?: ದುರಾದೃಷ್ಟ ಎಂದರೆ ಉತ್ತರ ಪ್ರದೇಶದ ಪೊಲೀಸರ ದಾಳಿ ವೇಳೆ ಬಿಜೆಪಿ ಮುಖಂಡ ಗುರುತಾಜ್ ಭುಲ್ಲರ್ ಮನೆಯಲ್ಲಿದ್ದ ಪತ್ನಿ ಗುರುಪ್ರೀತ್ ಭುಲ್ಲಾರ್ ಮೃತಪಟ್ಟಿದ್ದಾರೆ. ಗುರುಪ್ರೀತ್ ಸಾವಿನ ಬಗ್ಗೆ ಪತಿ ಗುರುತಾಜ್ ಕುಂದಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಕ್ಟೋಬರ್ 12ರಂದು ಸಂಜೆ 6.30ರ ಸುಮಾರಿಗೆ ಎರಡು ವಾಹನಗಳಲ್ಲಿ 10ರಿಂದ 12 ಜನರು ತಮ್ಮ ಮನೆಗೆ ಬಂದಿದ್ದರು ಎಂದು ಹೇಳಿದ್ದಾರೆ.
ಅಲ್ಲದೇ, ಅವರ ಬಾಯಿಂದ ಮದ್ಯದ ವಾಸನೆ ಬರುತ್ತಿತ್ತು. ನಾವೆಲ್ಲರೂ ಠಾಕುರ್ದ್ವಾರ ಪೊಲೀಸರು ಎಂದು ಹೇಳಿಕೊಂಡು ನಮಗೆ ನಿಂದಿಸಲು ಶುರು ಮಾಡಿದರು. ಅಲ್ಲದೇ, ಯಾವುದೋ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ಹೇಳುತ್ತಿದ್ದರು. ನಾನು ಬಿಜೆಪಿ ಬ್ಲಾಕ್ ಪ್ರಮುಖ ಎಂದು ಪರಿಚಯ ಮಾಡಿಕೊಂಡರೂ ನನ್ನನ್ನೂ ನಿಂದಿಸಿದರು. ಜೊತೆಗೆ ನನ್ನ ಎರಡು ಅಂತಸ್ತಿನ ಮನೆಯ ಕೋಣೆಗಳಿಗೆ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಈ ವೇಳೆ, ನನ್ನ ಪತ್ನಿ ಗುರುಪ್ರೀತ್ ಎದೆಗೆ ಗುಂಡು ತಗುಲಿದೆ ಎಂದು ತಮ್ಮ ದೂರಿನಲ್ಲಿ ಬಿಜೆಪಿ ಮುಖಂಡ ತಿಳಿಸಿದ್ದಾರೆ.
ಕಸ್ಟಡಿಯಿಂದ ಯುಪಿ ಪೊಲೀಸರು ಪರಾರಿ: ಗುಂಡಿನ ಸದ್ದು ಕೇಳಿ ಕುಟುಂಬಸ್ಥರು ಹಾಗೂ ಅಕ್ಕ ಪಕ್ಕದ ಜನರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಆಗ ಜನರೇ ನಾಲ್ವರು ಯುಪಿ ಪೊಲೀಸರನ್ನು ಹಿಡಿದು ಥಳಿಸಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರಿಂದ ಯುಪಿ ಪೊಲೀಸರನ್ನು ಉತ್ತರಾಖಂಡ ಪೊಲೀಸರು ತಮ್ಮ ಕಸ್ಟಡಿ ತೆಗೆದುಕೊಂಡಿದ್ದರು.
ಆದರೆ, ಜನರ ದಾಳಿಯಲ್ಲಿ ಗಾಯಗೊಂಡಿದ್ದರಿಂದ ಯುಪಿ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಿಂದ ಯುಪಿ ಪೊಲೀಸರು ಓಡಿಹೋಗಿದ್ದಾರೆ. ತಡೆಯಲು ಯತ್ನಿಸಿದಾಗ ಬ್ಯಾರಿಕೇಡ್ ಮುರಿದು ಪರಾರಿಯಾಗಿದ್ದಾರೆ ಎಂದು ಉತ್ತರಾಖಂಡ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಉತ್ತರ ಪ್ರದೇಶದ ಪೊಲೀಸರ ವಿರುದ್ಧ ಉತ್ತರಾಖಂಡ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ಐಎಎಸ್ ಅಧಿಕಾರಿ ಬಂಧನ, ಜಿಲ್ಲಾಧಿಕಾರಿ ಮನೆಗೆ ಇಡಿ ಸೀಲ್