ಅಜಂಗಢ (ಉತ್ತರ ಪ್ರದೇಶ): ಯೋಗಿ ಸರ್ಕಾರ ರಚನೆ ಮಾಡಿದಾಗಿನಿಂದ ಅಪರಾಧಗಳ ಸಂಖ್ಯೆ ಕಡಿಮೆ ಮಾಡಲು ರೌಡಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಿದ್ದರು. ಇದರಿಂದ ಹಲವಾರು ಪ್ರಕರಣಗಳಲ್ಲಿ ಪೊಲೀಸರು ಕ್ರಿಮಿನಲ್ಗಳನ್ನು ಹತ್ಯೆ ಮಾಡಿದ್ದರು. ಅಲ್ಲದೇ ರೌಡಿಗಳ ಮನೆ ಮೇಲೆ ಬುಲ್ಡೋಜರ್ ಹತ್ತಿಸಿ ಅವರ ಪುಂಡಾಟವನ್ನು ಕಡಿಮೆ ಮಾಡಿದ್ದರು.
ಆದರೆ, ಮುಂಬೈನ ಡಾನ್ ಅಬು ಸಲೇಂ ಅವರ ಸೋದರಳಿಯ ಆರಿಫ್ ತಲೆಮರೆಸಿಕೊಂಡಿದ್ದ. ಆರೀಫ್ ಹೆಸರು ದುಷ್ಕರ್ಮಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಯುಪಿ ಪೊಲೀಸರು ಆರಿಫ್‌ಗಾಗಿ ಹುಡುಕುತ್ತಿದ್ದರು. ಆತನ ಬಂಧನಕ್ಕಾಗಿ ಯುಪಿ ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಿದ್ದರು. ಆದರೆ, ಯಶಸ್ಸು ಕಾಣಲಿಲ್ಲ.
ಈ ನಡುವೆ ಆರಿಫ್ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಯುಪಿ ಪೊಲೀಸರಿಗೆ ಸಿಕ್ಕಿದೆ. ಅಂದಿನಿಂದ ಯುಪಿ ಪೊಲೀಸರು ಅಲ್ಲಿಯೇ ಮೊಕ್ಕಾಂ ಹೂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಆರಿಫ್ ಬಾಂದ್ರಾ ಹಿಲ್ ರೋಡ್ ಬಳಿ ಇರುವ ಟೀ ಅಂಗಡಿಗೆ ಬರಲು ಹೊರಟಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದರ ಮೇಲೆ ಯುಪಿ ಪೊಲೀಸರು ಮುಂಬೈ ಪೊಲೀಸರ ಸಹಾಯದಿಂದ ಅಲ್ಲಿಗೆ ಮುತ್ತಿಗೆ ಹಾಕಿದರು.
ಆರೀಫ್ ಅಂಗಡಿಗೆ ಬಂದು ಟೀ ಕುಡಿಯಲು ಆರಂಭಿಸಿದ ತಕ್ಷಣ ಪೊಲೀಸ್ ತಂಡ ಆತನನ್ನು ಹಿಡಿದಿದೆ. ಪೊಲೀಸರು ಆರೀಫ್‌ಗಾಗಿ ಬಹಳ ದಿನಗಳಿಂದ ಹುಡುಕುತ್ತಿದ್ದರು. ಆತನಿಗಾಗಿ ಯುಪಿ ಪೊಲೀಸರು ಹಲವು ಕಡೆ ದಾಳಿ ನಡೆಸಿದ್ದರು. ಇದೀಗ ಮುಂಬೈನಿಂದ ಬಂಧಿತ ಆರೀಫ್ನನ್ನು ಪೊಲೀಸ್ ಅಜಂಗಢಕ್ಕೆ ಕರೆತರಲಿದ್ದಾರೆ.