ಮೀರತ್ (ಉತ್ತರ ಪ್ರದೇಶ): ಖಲಿಸ್ತಾನಿ ಭಯೋತ್ಪಾದಕರು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೀರತ್‌ನಲ್ಲಿ ಶೋಧ ನಡೆಸಿದ್ದು, ಶಸ್ತ್ರಾಸ್ತ್ರ ಕಳ್ಳಸಾಗಣೆದಾರನನ್ನು ಬಂಧಿಸಿದೆ. ಮೀರತ್ ಮೂಲದ 32 ವರ್ಷದ ಮೊಹಮ್ಮದ್ ಆಸಿಫ್ ಅಲಿ ಬಂಧಿತ ಆರೋಪಿ.
ಬಂಧಿತನಿಂದ ದೇಶಿ ನಿರ್ಮಿತ ಎರಡು ಪಿಸ್ತೂಲ್, ಹತ್ತು ಸುತ್ತಿನ ಜೀವಂತ ಗುಂಡುಗಳು, ಮೊಬೈಲ್, ಸಿಮ್ ಕಾರ್ಡ್, ಮೆಮೊರಿ ಕಾರ್ಡ್ಅನ್ನು ಎನ್‌ಐಎ ವಶಪಡಿಸಿಕೊಂಡಿದೆ.
2021 ರ ಮೇ 22 ರಂದು ಪಂಜಾಬ್ನ ಮೊಗಾ ಜಿಲ್ಲೆಯ ಮೆಹ್ನಾ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ವಿದೇಶದಲ್ಲಿ ನೆಲೆಸಿರುವ ಮೊಗಾ ನಿವಾಸಿ ಅರ್ಷ್ದೀಪ್ ಸಿಂಗ್ ಅಲಿಯಾಸ್ ಅರಸ್, ಬರ್ನಾಲಾ ನಿವಾಸಿ ಚರಣ್ಜಿತ್ ಸಿಂಗ್ ಅಲಿಯಾಸ್ ರಿಂಕು ಮತ್ತು ಫಿರೋಜ್ಪುರದ ನಿವಾಸಿ ರಮನ್‌ದೀಪ್ ಸಿಂಗ್ ಅಲಿಯಾಸ್ ಜಜ್ಜ್ ಗ್ಯಾಂಗ್ ರಚಿಸಿ ಸುಲಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಇವರು ಉದ್ಯಮಿ, ಗಣ್ಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದಾರೆ.