ಲಖನೌ, ಉತ್ತರ ಪ್ರದೇಶ:ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೋವಿಡ್ ಹಾವಳಿ ಸೃಷ್ಟಿ ಮಾಡಿದ್ದು, ಈಗ ಉತ್ತರ ಪ್ರದೇಶ ಸಚಿವ ವಿಜಯ್ ಕಶ್ಯಪ್ ಕೊರೊನಾಗೆ ಬಲಿಯಾಗಿದ್ದಾರೆ. ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಲ್ಲಿ ವಿಜಯ್ ಕಶ್ಯಪ್ಗೆ ನೀಡುತ್ತಿದ್ದ ಚಿಕಿತ್ಸೆ ವಿಫಲವಾಗಿದೆ.
ಚಾರ್ತವಾಲ್ ವಿಧಾನಸಭಾ ಸ್ಥಾನದಿಂದ ಆಯ್ಕೆಯಾಗಿದ್ದ ಇವರಿಗೆ 52 ವರ್ಷ ವಯಸ್ಸಾಗಿದ್ದು, ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ವಿಜಯ್ ಕಶ್ಯಪ್ ಮೃತಪಟ್ಟಿದ್ದು, ಕೋವಿಡ್ನಿಂದ ಮೃತಪಟ್ಟ ಉತ್ತರ ಪ್ರದೇಶದ ಐದನೇ ಶಾಸಕರಾಗಿದ್ದಾರೆ.
ಮೇ 7ರಂದು ಉತ್ತರ ಪ್ರದೇಶದ ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಬಹದ್ದೂರ್ ಕೋರಿ ಅವರು ಲಕ್ನೋದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ನಿಂದಾಗಿ ಸಾವನ್ನಪ್ಪಿದ್ದರು. ರಾಜನಾಥ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಕೋರಿ ಅವರನ್ನು ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.