ಲಖನೌ(ಉತ್ತರಪ್ರದೇಶ):ಉತ್ತರಪ್ರದೇಶ ಬಿಜೆಪಿ ಸರ್ಕಾರದ ಮತ್ತೊಬ್ಬ ಸಚಿವ ಧರಂ ಸಿಂಗ್ ಸೈನಿ ಪಕ್ಷ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಕಳೆದ 3 ದಿನದಲ್ಲಿ ಮೂವರು ಸಚಿವರು ಮತ್ತು 5 ಶಾಸಕರು ಪಕ್ಷಕ್ಕೆ ವಿದಾಯ ಹೇಳಿದಂತಾಗಿದೆ.
ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತ ಸಚಿವರಾಗಿದ್ದ ಧರಂ ಸಿಂಗ್ ಸೈನಿ ಕೆಲ ದಿನಗಳ ಹಿಂದೆ ಉತ್ತರಪ್ರದೇಶ ಸರ್ಕಾರ ನೀಡಿದ್ದ ಭದ್ರತೆ, ಅಧಿಕೃತ ನಿವಾಸವನ್ನು ಹಿಂದಿರುಗಿಸಿದ್ದರು. ಇದು ಅವರು ಪಕ್ಷವನ್ನು ತೊರೆಯಲಿದ್ದಾರೆ ಎಂಬ ಸುಳಿವು ನೀಡಿತ್ತು. ಇದೀಗ ಪಕ್ಷದಿಂದ ಅಧಿಕೃತವಾಗಿ ಹೊರಬಂದಿದ್ದಾರೆ.
ಇನ್ನು ಮೊನ್ನೆಯಷ್ಟೇ ಕ್ಯಾಬಿನೆಟ್ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದಲ್ಲದೇ ಐವರು ಬಿಜೆಪಿ ಶಾಸಕರಾದ ಬ್ರಜೇಶ್ ಪ್ರಜಾಪತಿ, ರೋಷನ್ ಲಾಲ್ ವರ್ಮಾ, ಭಗವತಿ ಸಾಗರ್, ಮುಖೇಶ್ ವರ್ಮಾ, ವಿನಯ್ ಶಾಕ್ಯ ಕೂಡ ಬಿಜೆಪಿಗೆ ಗುಡ್ಬೈ ಹೇಳಿದ್ದರು.
ಇನ್ನಷ್ಟು ಶಾಸಕರಿಂದ ರಾಜೀನಾಮೆ: ಧರಂ ಸಿಂಗ್ ಸೈನಿ
ಕಳೆದ 5 ವರ್ಷದಲ್ಲಿ ದಲಿತರು, ಹಿಂದುಳಿದವರು, ರೈತರು, ನಿರುದ್ಯೋಗಿ ಯುವಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ಈ ಕಾರಣಕ್ಕಾಗಿ ಸರ್ಕಾರದಿಂದ ಹೊರ ಬರುತ್ತಿದ್ದೇನೆ. ಮತ್ತೊಬ್ಬ ಸಚಿವರು ಸರ್ಕಾರದಿಂದ ಹೊರ ಬರಲಿದ್ದಾರೆ. ಇದಲ್ಲದೇ, ಜನವರಿ 20 ರವರೆಗೂ ದಿನವೂ 3-4 ಜನ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಧರಂ ಸಿಂಗ್ ಸೈನಿ ಹೇಳಿಕೆ ನೀಡಿದ್ದಾರೆ.
ಅಖಿಲೇಶ್ ಯಾದವ್ ಸ್ವಾಗತ
ಧರಂ ಸಿಂಗ್ ಸೈನಿ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಲು ಮುಂದಾಗಿದ್ದು, ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತ ಫೋಟೋವನ್ನು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, 'ಪಕ್ಷಕ್ಕೆ ಧರಂ ಸಿಂಗ್ ಸೈನಿ ಅವರನ್ನು ಸ್ವಾಗತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಜನ ಬಿಜೆಪಿ ಬಿಡ್ತಾರೆ: ಶರದ್ ಪವಾರ್