ಲಖನೌ (ಉತ್ತರಪ್ರದೇಶ) :ದೇಶದಲ್ಲಿ ಹಿಂದಿ ಹೇರಿಕೆ ಚರ್ಚೆ ನಡೆಯುತ್ತಿರುವಾಗಲೇ, ಉತ್ತರಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಬಳಕೆ ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ರಾಜ್ಯಾದ್ಯಂತ ಎಲ್ಲಾ ವೈದ್ಯಕೀಯ ಸಂಸ್ಥೆಗಳು ಹಿಂದಿಯಲ್ಲಿ ಬೋಧನೆಯನ್ನು ಪ್ರಾರಂಭಿಸಬೇಕು ಮತ್ತು ಈ ಬಗ್ಗೆ ಮಾಸಿಕವಾಗಿ ಮಾಹಿತಿಯನ್ನು ವೈದ್ಯಕೀಯ ಶಿಕ್ಷಣದ ಮಹಾನಿರ್ದೇಶಕರಿಗೆ ಒದಗಿಸಲು ಆದೇಶದಲ್ಲಿ ಸೂಚಿಸಲಾಗಿದೆ.
ಎಲ್ಲಾ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳು, ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು), ಡಾ ರಾಮ್ ಮನೋಹರ್ ಲೋಹಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್‌ಎಂಎಲ್‌ಐಎಂಎಸ್) ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಹಿಂದಿಯಲ್ಲಿ ಬೋಧನೆಯನ್ನು ಪ್ರಾರಂಭಿಸಬೇಕು ಎಂದು ಸರ್ಕಾರ ಅಕ್ಟೋಬರ್ 31 ರಂದು ಪತ್ರ ರವಾನಿಸಿದೆ ಎಂದು ಸಾಮಾನ್ಯ ವೈದ್ಯಕೀಯ ಶಿಕ್ಷಣ (ಡಿಜಿಎಂಇ) ಅಧಿಕಾರಿ ಕಿಂಜಲ್ ಸಿಂಗ್ ತಿಳಿಸಿದ್ದಾರೆ.
ಸಲೀಸಾಗಿ ಅರಿಯಲು ಸಾಧ್ಯ:ಸರ್ಕಾರದ ಈ ನಿರ್ಧಾರದಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ವಿಶೇಷವಾಗಿ ಹಿಂದಿಯಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಿದೆ. ವಿಷಯದ ಮೇಲೆ ನಿಖರ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇಂಗ್ಲಿಷ್ ಹೆಚ್ಚಾಗಿ ಬಲ್ಲ ವಿದ್ಯಾರ್ಥಿಗಳು ವೈದ್ಯಕೀಯ ಭಾಷೆಯನ್ನು ಅರಿತುಕೊಳ್ಳುವಲ್ಲಿ ಕಷ್ಟಪಡುತ್ತಾರೆ. ಹಿಂದಿಯಲ್ಲಿ ಅದನ್ನು ಬೋಧನೆ ಮಾಡುವುದರಿಂದ ಸಲೀಸಲಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ ಎಂಬುದು ವಿಶ್ಲೇಷಣೆಯಾಗಿದೆ.
ವೈದ್ಯಕೀಯ ವಿಷಯಗಳ ಎಲ್ಲ ಪುಸ್ತಕಗಳು ಈಗ ಹಿಂದಿಯಲ್ಲಿ ಲಭ್ಯವಿವೆ. ಇನ್ನು ಕೆಲವು ಪರಿಶೀಲಿಸಲಾಗುತ್ತಿದೆ. ರಷ್ಯಾ, ಚೀನಾ, ಜಪಾನ್‌ನಂತಹ ಅನೇಕ ದೇಶಗಳು ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯಲ್ಲಿ ಬೋಧನೆ ಮಾಡುತ್ತಿವೆ. ಇದು ಶಿಕ್ಷಣದ ಗುಣಮಟ್ಟ ಕೂಡ ಸುಧಾರಿಸಲಿದೆ ಎಂದು ಕೆಜಿಎಂಯುನ ಶರೀರಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಸ್. ವರ್ಮಾ ಅಭಿಪ್ರಾಯಪಟ್ಟಿದ್ದಾರೆ.