ಮೀರತ್(ಉತ್ತರ ಪ್ರದೇಶ):ರಾಜ್ಯಸಭೆಯ ಮಾಜಿ ಸಂಸದನೆಂದು ಬಿಂಬಿಸಿ, ವ್ಯಕ್ತಿಯೋರ್ವ ಸುಮಾರು ಒಂದು ಕೋಟಿ ರೂಪಾಯಿ ಪರಿಹಾರದ ಹಣವನ್ನು ದೋಚಲು ಯತ್ನಿಸಿರುವ ಆರೋಪ ಉತ್ತರ ಪ್ರದೇಶದ ಮೀರತ್ನಲ್ಲಿ ಕೇಳಿಬಂದಿದೆ.
ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಹಾಗೂ 2013ರಲ್ಲಿ ನಿಧನ ಹೊಂದಿದ್ದ ಪ್ರೇಮ್ ಮನೋಹರ್ಗೆ ಬರಬೇಕಾಗಿದ್ದ ಭೂಮಿ ಸ್ವಾಧೀನದ ಪರಿಹಾರದ ಹಣವನ್ನು ವ್ಯಕ್ತಿಯೋರ್ವ ಲಪಟಾಯಿಸಲು ಯತ್ನಿಸಿದ್ದಾನೆ. ಆದರೆ ಕೊನೆ ಕ್ಷಣದಲ್ಲಿ ಸತ್ಯ ಗೊತ್ತಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.
ನಡೆದಿದ್ದೇನು?
ರಸ್ತೆಯೊಂದಕ್ಕಾಗಿ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ವ್ಯಕ್ತಿಯೋರ್ವ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ತಾನೇ ಪ್ರೇಮ್ ಮನೋಹರ್ ಎಂದು ಬಿಂಬಿಸಿ, ಭೂಸ್ವಾಧೀನ ಪ್ರಕ್ರಿಯೆಯ ವಿವರಗಳು, ಆಧಾರ್ ಕಾರ್ಡ್, ವಿಳಾಸ ದೃಢೀಕರಣ, ವೋಟರ್ ಐಡಿ, ಪಾಸ್ಬುಕ್ ತೋರಿಸಿ ತನಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ.
ಎಲ್ಲಾ ದಾಖಲೆಗಳು ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದಿದ್ದು, ಪರಿಹಾರ ಹಣ ನೀಡುವ ಪ್ರಕ್ರಿಯೆ ಬಹುಪಾಲು ಮುಗಿದಿದೆ. ಸುಮಾರು 84 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಣೆ ಮಾಡಬೇಕೆಂದು ನಿರ್ಧಾರ ಮಾಡಿದ್ದಾಗ, ವ್ಯಕ್ತಿಯೊಬ್ಬರು ಪ್ರೇಮ್ ಮನೋಹರ್ ಬದುಕಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ಇದಾದ ನಂತರ ಆರೋಪಿ ಪರಾರಿಯಾಗಿದ್ದಾನೆ. ಪ್ರೇಮ್ ಮನೋಹರ್ ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದಾಗ, ಈಗಾಗಲೇ ಪ್ರೇಮ್ ಮನೋಹರ್ ಅವರ ಮರಣದ ಬಗ್ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಆರೋಪಿಯ ಗುರುತು ಪತ್ತೆ ಹಚ್ಚಿ, ಬಂಧಿಸಲು ಪೊಲೀಸರಿಗೆ ಜಿಲ್ಲಾಧಿಕಾರಿ ಕೆ.ಬಾಲಾಜಿ ಆದೇಶಿಸಿದ್ದಾರೆ.
ಪ್ರೇಮ್ ಮನೋಹರ್ 1968ರಿಂದ 1974 ಹಾಗೂ 1977ರಿಂದ 1980ರವರೆಗೆ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಜನತಾ ಪಕ್ಷದವರಾದ ಇವರು ಸುಮಾರು 25 ಎಕರೆ ಜಮೀನನ್ನು ರಾಷ್ಟ್ರೀಯ ಹೆದ್ದಾರಿ 119ರ ಸಮಸ್ಪುರದಲ್ಲಿ ಹೊಂದಿದ್ದು, ಇತ್ತೀಚೆಗೆ ಅದರ ಸ್ವಲ್ಪ ಭಾಗವನ್ನು ರಸ್ತೆಗಾಗಿ ಪ್ರಾಧಿಕಾರಗಳು ಒತ್ತುವರಿ ಮಾಡಿಕೊಂಡಿದ್ದವು. ಈ ಪರಿಹಾರದ ಹಣವನ್ನೇ ಲಪಟಾಯಿಸಲು ಆರೋಪಿ ಯತ್ನಿಸಿದ್ದಾನೆ.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಸಕ್ಕರೆ ಸಂಕಷ್ಟ: ಒಂದು ಕೆ.ಜಿ ಶುಗರ್ ಬೆಲೆ 145 ರೂಪಾಯಿ!