ಅಲಿಗಢ (ಉತ್ತರಪ್ರದೇಶ):ಬ್ರಾಂಡ್ ಕಂಪನಿಯ ಮೊಬೈಲ್ ಫೋನ್ ಒಂದು ಸ್ಫೋಟಗೊಂಡು 47 ವರ್ಷದ ಉದ್ಯಮಿಯೊಬ್ಬರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಉತ್ತರಪ್ರದೇಶ ರಾಜ್ಯದ ಅಲಿಗಢದಲ್ಲಿ ನಡೆದಿದೆ.
ಪ್ರೇಮ್ ರಾಜ್ ಸಿಂಗ್ ಎಂಬ ಉದ್ಯಮಿ ಉತ್ತಮ ಬ್ರಾಂಡ್‌ನ ಮೊಬೈಲ್ ಅನ್ನು ಮೂರು ವರ್ಷದ ಹಿಂದೆ ಖರೀದಿಸಿದ್ದರು. ಎಂದಿನಂತೆ ತಮ್ಮ ಫೋನ್ ಅನ್ನು ತಮ್ಮ ಜೇಬಿನಲ್ಲಿ ಇರಿಸಿಕೊಂಡಿದ್ದರು. ಅದೇಕೋ ಅವರಿಗೆ ತಮ್ಮ ಜೇಬು ಬಿಸಿಯಾಗಿದೆ ಎಂಬ ಅನುಭವವಾಗಿದೆ. ಜೊತೆಗೆ ಮೊಬೈಲಿಂದ ಹೊಗೆ ಬರಲು ಪ್ರಾರಂಭವಾಗಿದೆ. ತಕ್ಷಣವೇ ಮೊಬೈಲ್ ಅನ್ನು ಬೇಬಿನಿಂದ ಹೊರ ತೆಗೆದಿದ್ದಾರೆ. ಆದರೆ, ಅದಾಗಲೇ ದೊಡ್ಡ ಶಬ್ದದಿಂದ ಮೊಬೈಲ್ ಸ್ಫೋಟ ಗೊಂಡಿದೆ. ಜೊತೆಗೆ ಮೊಬೈಲ್ 2 ಭಾಗಗಳಾಗಿ ಬೇರ್ಪಟ್ಟಿವೆ ಎಂದು ಘಟನೆಯ ನಂತರ ಗಾಯಾಳು ಪ್ರೇಮ್ ರಾಜ್ ಸಿಂಗ್ ಹೇಳಿದ್ದಾರೆ.
ಘಟನೆ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಸ್ಫೋಟದ ಪರಿಣಾಮ ಸಿಂಗ್ ಅವರ ಎಡಗೈ ಹೆಬ್ಬೆರಳು ಮತ್ತು ತೊಡೆಯ ಮೇಲೆ ಸುಟ್ಟ ಗಾಯಗಳಾಗಿದ್ದು. ಅದಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಗಾಯಾಳು ಪ್ರೇಮ್ ರಾಜ್ ಸಿಂಗ್," ನಾನು ಹಲವು ವರ್ಷಗಳಿಂದ ಅದೇ ಬ್ರಾಂಡ್‌ನ ಫೋನ್ ಬಳಸುತ್ತಿದ್ದೇನೆ. ಆದರೆ ಇಂದು ನನ್ನ ಮೊಬೈಲ್ ಜೇಬ್ನಿಂದ ಹೊರ ತೆಗೆಯುವಷ್ಟರಲ್ಲೇ ಬ್ಲಾಸ್ಟ್ ಆಗಿದೆ. ಹಾಗಾಗಿ ಆ ಕಂಪನಿಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ. ಅದೃಷ್ಟವಶಾತ್ ಸಣ್ಣ ಮಟ್ಟಿಗೆ ಗಾಯಗಳಾಗಿ, ಬಚಾವ್ ಆಗಿದ್ದೇನೆ ಎಂದು ನಿಟ್ಟುಸಿರು ಬಿಟ್ಟರು.