ಶಹಜಹಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನೂನು ಬಾಹಿರ ಧಾರ್ಮಿಕ ಪರಿವರ್ತನೆ ಸುಗ್ರೀವಾಜ್ಞೆ ಸೆಕ್ಷನ್ 3/5 2020ರ ಅಡಿಯಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ಯುವಕ, ಆತನ ಪೋಷಕರು, ಮೂವರು ಒಡಹುಟ್ಟಿದವರು ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಹೊಸ ಕಾನೂನು ಜಾರಿಗೆ ಬಂದ ಬಳಿಕ ಇದು ಹತ್ತನೇ ಪ್ರಕರಣವಾಗಿದೆ. ಬಜರಂಗದಳದ ಕಾರ್ಯಕರ್ತರೊಂದಿಗೆ ತೆರಳಿ ಮಹಿಳೆ ದೂರು ದಾಖಲಿಸಿದ್ದಾಳೆ.
ದೂರಿನಲ್ಲಿ ಏನಿದೆ:
ಆರೋಪಿ ತನ್ನನ್ನು ಸುನೀಲ್ ಎಂದು ಪರಿಚಯಿಸಿಕೊಂಡು, ಸಂತ್ರಸ್ತೆ ಜೊತೆ ಸ್ನೇಹ ಬೆಳೆಸಿದ್ದಾನೆ. ಬಳಿಕ ಆಕೆ ಮೇಲೆ ಅತ್ಯಾಚಾರವೆಸಗಿ, ಅದನ್ನು ವಿಡಿಯೋ ಸಹ ಮಾಡಿದ್ದಾನೆ. ಆ ವಿಡಿಯೋ ಇಟ್ಟುಕೊಂಡು ಈಕೆಯನ್ನು ಬ್ಲ್ಯಾಕ್ಮೇಲ್ ಮಾಡಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೆ, ಆತ ತಾನು ಮುಸ್ಲಿಂ ಎಂದು ಹೇಳಿಕೊಂಡಿದ್ದು, ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆತ ಮತ್ತು ಆತನ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಅದಕ್ಕೆ ವಿರೋಧಿಸಿದಾಗ, ಧಾರ್ಮಿಕ ಮುಖಂಡನ ಸೂಚನೆಯ ಮೇರೆಗೆ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇದನ್ನು ಓದಿ: ಲವ್ ಜಿಹಾದ್ ವಿರುದ್ಧ ಕಾನೂನು ಸಮರ: ಉತ್ತರ ಪ್ರದೇಶದಲ್ಲಿ 'ನಿಖಾ' ರದ್ದು
ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ಸುಗ್ರೀವಾಜ್ಞೆಯ ಯುಪಿ ನಿಷೇಧದ ಸೆಕ್ಷನ್ 3/5 ಜೊತೆಗೆ ಸೆಕ್ಷನ್ 376 (ಅತ್ಯಾಚಾರ), 384(ಸುಲಿಗೆ), 147 (ಗಲಭೆ), 323 (ನೋವನ್ನುಂಟು ಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂಜಯ್ ಕುಮಾರ್ ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ್ದು, "ಪ್ರಾಥಮಿಕ ತನಿಖೆಯ ನಂತರ, ಮಹಿಳೆ ಕಳೆದ ಐದು ವರ್ಷಗಳಿಂದ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಳು. ಮುಖ್ಯ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ನಮ್ಮ ತನಿಖೆ ನಡೆಯುತ್ತಿದೆ " ಎಂದಿದ್ದಾರೆ.