ಮಥುರಾ(ಉತ್ತರ ಪ್ರದೇಶ): ಬಸ್, ರೈಲು ಹಾಗೂ ಆಟೋಗಳಲ್ಲಿ ಪ್ರಯಾಣಿಸುವಾಗ, ಹೋಟೆಲ್ಗಳಲ್ಲಿ ಊಟ, ಉಪಹಾರ ಮಾಡುವಾಗ ನಮ್ಮಿಂದ ಕೆಲವೆಡೆ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಾರೆ. ಈ ವೇಳೆ ನಾವು ಮರಳಿ ಪ್ರಶ್ನೆ ಮಾಡದೇ ಸುಮ್ಮನಾಗಿ ಬಿಡುತ್ತೇವೆ. ಆದರೆ, ಉತ್ತರ ಪ್ರದೇಶದ ವಕೀಲನೋರ್ವ 20 ರೂಪಾಯಿಗೋಸ್ಕರ ಬರೋಬ್ಬರಿ 22 ವರ್ಷಗಳ ಕಾನೂನು ಹೋರಾಟ ನಡೆಸಿ, ಅದರಲ್ಲಿ ಗೆಲುವು ಸಾಧಿಸಿದ್ದಾರೆ.
22 ವರ್ಷದ ಹಿಂದಿನ ಘಟನೆ: 1999ರ ಡಿಸೆಂಬರ್ 25ರಲ್ಲಿ ನಡೆದ ಪ್ರಕರಣ ಇದಾಗಿದೆ. ಮಥುರಾದ ವಕೀಲ ತುಂಗನಾಥ್ ಚತುರ್ವೇದಿ ಮಥುರಾ ಕಂಟೋನ್ಮೆಂಟ್ನಿಂದ ಮೊರಾದಾಬಾದ್ಗೆ ತೆರಳಲು ಎರಡು ಟಿಕೆಟ್ ಖರೀದಿಸಿದ್ದರು. ಈ ವೇಳೆ ಟಿಕೆಟ್ ಬೆಲೆ 35 ರೂಪಾಯಿ ಆಗಿತ್ತು. ಆದರೆ, ಟಿಕೆಟ್ ನೀಡಿದ್ದ ಕ್ಲರ್ಕ್ 70 ರೂಪಾಯಿ ಬದಲಿಗೆ 90 ರೂಪಾಯಿ ತೆಗೆದುಕೊಂಡಿದ್ದರು. 20 ರೂಪಾಯಿ ಹೆಚ್ಚುವರಿ ತೆಗೆದುಕೊಂಡಿದ್ದೀರಿ ಎಂದು ಕೇಳಿದ್ರೂ ಸಹ ಹಣ ವಾಪಸ್ ನೀಡಿರಲಿಲ್ಲ. ಈ ವೇಳೆ ರೈಲು ಆಗಮಿಸಿದ್ದ ಕಾರಣ ತುಂಗನಾಥ್ ತಮ್ಮ ಸ್ನೇಹಿತನೊಂದಿಗೆ ಪ್ರಯಾಣ ಬೆಳೆಸಿದ್ದರು.
ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲು:ಪ್ರಯಾಣ ಬೆಳೆಸಿ ವಾಪಸ್ ಆದ ಬಳಿಕ ತುಂಗನಾಥ್ ಅವರು, ಈಶಾನ್ಯ ರೈಲ್ವೆ ಗೋರಖ್ಪುರದ ಜನರಲ್ ಮ್ಯಾನೇಜರ್, ಮಥುರಾ ಕಂಟೋನ್ಮೆಂಟ್ ರೈಲು ನಿಲ್ದಾಣ, ಟಿಕೆಟ್ ಬುಕ್ಕಿಂಗ್ ಕ್ಲರ್ಕ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೀಗಾಗಿ, ಗ್ರಾಹಕ ವೇದಿಕೆ ಸಮನ್ಸ್ ಸಹ ಜಾರಿ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಸಹ ವಿಚಾರಣೆ ನಡೆಸಿದ್ದು, ಆಗಸ್ಟ್ 5ರಂದು ಅಂತಿಮ ತೀರ್ಪು ಪ್ರಕಟಗೊಂಡಿದೆ.