ಲಖನೌ (ಉತ್ತರಪ್ರದೇಶ) :ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಉತ್ತರಪ್ರದೇಶ ಸರ್ಕಾರ ಜಾಗರೂಕತೆ ತೋರಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಲಖನೌದಲ್ಲಿ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸ್ಥಾಪಿಸಿರುವ ಅಟಲ್ ಬಿಹಾರಿ ವಾಜಪೇಯಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿ ನಿಭಾಯಿಸುವಲ್ಲಿ ಉತ್ತರಪ್ರದೇಶ ಸರ್ಕಾರ ಜಾಗರೂಕತೆ ತೋರಿಸಿದೆ. ಕೆಲಸ ಮಾಡುವವರು ತಪ್ಪುಗಳನ್ನು ಮಾಡುತ್ತಾರೆ. ಆದರೆ, ಇದು ಟೀಕಿಸುವ ಸಮಯವಲ್ಲ. ತಪ್ಪುಗಳನ್ನು ನೋಡಿ ಸಲಹೆಗಳನ್ನು ನೀಡಿದರೆ ಸರ್ಕಾರ ಅದನ್ನು ಸ್ವಾಗತಿಸುತ್ತದೆ ಎಂದಿದ್ದಾರೆ.
ಇದೇ ವೇಳೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮತ್ತು ಉತ್ತರ ಪ್ರದೇಶ ಸರ್ಕಾರ ಸ್ಥಾಪಿಸಿದ 255 ಹಾಸಿಗೆಗಳ ಕೊರೊನಾ ಆಸ್ಪತ್ರೆಯನ್ನು ಉದ್ಘಾಟಿಸಿದರು.
ಸುಮಾರು 25 ವೆಂಟಿಲೇಟರ್‌ಗಳು ಮತ್ತು ಸರಿಸುಮಾರು 100 ಹೆಚ್‌ಎಫ್‌ಎನ್‌ಸಿಗಳು (ಹೈ ಫ್ಲೋ ನಾಸಲ್ ಕ್ಯಾನುಲಾ) ಸೌಲಭ್ಯ ಈ ಆಸ್ಪತ್ರೆಯಲ್ಲಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ. ಹೆಚ್‌ಎಎಲ್ (ಲಖನೌ) ಯೋಜನೆಯ ಮುಖ್ಯಸ್ಥ ರಾಕೇಶ್ ಕುಮಾರ್ ಮಿಶ್ರಾ ಅವರ ಪ್ರಕಾರ, ಈ ಹೈಟೆಕ್ ಆಸ್ಪತ್ರೆಯನ್ನು 10-12 ದಿನಗಳಲ್ಲಿ ಸ್ಥಾಪಿಸಲಾಯಿತು.