ಪ್ರಯಾಗ್ರಾಜ್(ಉತ್ತರಪ್ರದೇಶ):ಅಖಾರ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ಸ್ಥಳದಲ್ಲಿ ಸೂಸೈಡ್ ನೋಟ್ ಕೂಡ ಲಭ್ಯವಾಗಿತ್ತು. ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಅನೇಕ ಆಗ್ರಹಗಳು ಕೇಳಿ ಬರುತ್ತಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಿಫಾರಸು ಮಾಡಿ ಆದೇಶ ನೀಡಿದ್ದಾರೆ. ಉತ್ತರ ಪ್ರದೇಶ ಗೃಹ ಇಲಾಖೆ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ದೃಢಪಡಿಸಿದೆ.
ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರ ಅನುಮಾನಾಸ್ಪದ ಸಾವಿನ ಕುರಿತು ಅನೇಕ ಅನುಮಾನಗಳು ಭುಗಿಲೆದ್ದಿದೆ. ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ತನಿಖೆ ನಡೆಸುವಂತೆ ಅನೇಕರಿಂದ ಒತ್ತಡ ಬಂದಿದೆ.
ಇನ್ನು ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದರೂ ಸಹ ಶೀಘ್ರ ತನಿಖೆಗಾಗಿ ಉತ್ತರಪ್ರದೇಶ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಡೆತ್ನೋಟ್ನಲ್ಲೇನಿದೆ...?
ಸೆಪ್ಟೆಂಬರ್ 20 ರಂದು ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷರಾದ ಮಹಾಂತ ನರೇಂದ್ರ ಗಿರಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಬಹು ಪುಟಗಳ ಸೂಸೈಡ್ ನೋಟ್ ಕೂಡ ಪತ್ತೆಯಾಗಿತ್ತು.
ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಬಹು ಪುಟಗಳ ಸೂಸೈಡ್ ನೋಟ್
ಅದರಲ್ಲಿ "ಶಿಷ್ಯ ಆನಂದ ಗಿರಿ ನನ್ನನ್ನು ಅವಮಾನಗೊಳಿಸಲು ಪ್ರಯತ್ನ ಪಟ್ಟಿದ್ದರು. ಹುಡುಗಿಯೊಂದಿಗೆ ನನ್ನ ಮಾರ್ಫ್ (ನಕಲಿ) ಫೋಟೋ ಇಟ್ಟುಕೊಂಡು ಅದನ್ನು ಸಾರ್ವಜನಿಕ ವಲಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದರು.
ಆನಂದ ಗಿರಿ ಕಂಪ್ಯೂಟರ್ನಲ್ಲಿ ಫೋಟೋಗಳು ಇದ್ದವು. ಅಲ್ಲದೇ, ಈ ಫೋಟೋ ಎಲ್ಲೆಡೆ ಹರಡಿದರೆ ಎಷ್ಟು ಜನರಿಗೆ ನಿಮ್ಮ ಮುಗ್ಧತೆಯನ್ನು ಸಾಬೀತುಪಡಿಸುತ್ತೀರಿ? ಎಂದು ನನ್ನನ್ನು ಕೇಳಿದ್ದರು. ನಾನು ಸಮಾಜದಲ್ಲಿ ಘನತೆಯಿಂದ ಬದುಕಿದ ವ್ಯಕ್ತಿ. ಈ ಅವಮಾನ ತಾಳಲಾರೆನು. ಹಾಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ" ಎಂದು ಬರೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನೋಟ್ನಲ್ಲಿ ಯಾರ್ಯಾರ ಹೆಸರಿದೆ?
ಡೆತ್ನೋಟ್ನಲ್ಲಿ ಆನಂದ ಗಿರಿ, ಲೇಟೆ ಹನುಮಾನ್ ದೇವಸ್ಥಾನದ ಪ್ರಧಾನ ಅರ್ಚಕ ಆದ್ಯಾ ತಿವಾರಿ, ಆದ್ಯ ತಿವಾರಿಯ ಮಗ ಸಂದೀಪ್ ತಿವಾರಿಯ ಹೆಸರನ್ನು ಬರೆದಿದ್ದರು. ಸದ್ಯ ಪೊಲೀಸರು ಹರಿದ್ವಾರದಲ್ಲಿ ಆನಂದ್ ಗಿರಿಯನ್ನು ವಶಕ್ಕೆ ಪಡೆದಿದ್ದಾರೆ. ಉಳಿದಿಬ್ಬರಿಗಾಗಿ ಪೊಲೀಸರು ರಚಿಸಿದ್ದ ಎಸ್ಐಟಿ ತಂಡ ತನಿಖೆ ನಡೆಸುತ್ತಿತ್ತು. ಈ ವೇಳೆ, ಸಂದೀಪ್ ತಿವಾರಿಯೂ ಸೆರೆ ಸಿಕ್ಕಿದ್ದಾನೆ. ಆದ್ಯ ತಿವಾರಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಇಂದು ಆತನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ವಶದಲ್ಲಿರುವ ಇಬ್ಬರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಕಳುಹಿಸಿದೆ. ಆದ್ಯ ತಿವಾರಿಯನ್ನು ಶೀಘ್ರದಲ್ಲೇ ಕೋರ್ಟ್ ಹಾಜರುಪಡಿಸುವ ಸಾಧ್ಯತೆ ಇದೆ
ರಾಜಕೀಯ ಪಕ್ಷಗಳ ಒತ್ತಡ...
ನರೇಂದ್ರ ಗಿರಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವು ಪಕ್ಷಗಳು ಸಿಬಿಐ ತನಿಖೆಗೆ ಒತ್ತಾಯಿಸಿದ್ದವು.