ಲಕ್ನೋ (ಉತ್ತರ ಪ್ರದೇಶ) : ವೀರ್ ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ರಾಜ್ಯ ಶಿಕ್ಷಣ ಮಂಡಳಿಯ ವಿದ್ಯಾರ್ಥಿಗಳಿಗೆ ಕಡ್ಡಾಯ ವಿಷಯವಾಗಿ ಸೇರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಹೇಳಿಕೆಯ ಪ್ರಕಾರ, ಮಂಡಳಿಯು ಇನ್ನೂ 50 ಮಹಾನ್ ಪುರುಷರ ಜೀವನ ಕಥೆಗಳನ್ನು ಪಠ್ಯಕ್ರಮದಲ್ಲಿ ಸೇರಿಸಲು ತೀರ್ಮಾನಿಸಿದೆ.
ರಾಜ್ಯದ ಮಕ್ಕಳಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳು, ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಇತಿಹಾಸಕಾರರು ಹಾಗೂ ಮಹಾನ್ ವ್ಯಕ್ತಿಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಕ್ಕಳಿಗೆ ಪರಿಚಯಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಶಾಲೆಗಳಲ್ಲಿ ಜುಲೈನಿಂದ ಪ್ರಾರಂಭವಾಗುವ ಪಠ್ಯಕ್ರಮದಲ್ಲಿ ಪರಿಷ್ಕೃತ ಪಠ್ಯಕ್ರಮವನ್ನು ಸೇರಿಸಲಾಗುವುದು. ಎಲ್ಲ ಶಾಲೆಗಳಿಗೆ ಈ ವಿಷಯವನ್ನು ಕಡ್ಡಾಯಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಈ ವಿಷಯದಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
ಆದರೆ, ಪ್ರೌಢಶಾಲೆ ಮತ್ತು ಮಧ್ಯಂತರ ಅಂಕಪಟ್ಟಿಯಲ್ಲಿ ಈ ಪಠ್ಯಗಳ ಅಂಕಗಳನ್ನು ಸೇರಿಸಲಾಗುವುದಿಲ್ಲ. ಈ ಕ್ರಮವು ದೇಶದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿದ್ಯಾರ್ಥಿಗಳಲ್ಲಿ ಜ್ಞಾನಾಭಿವೃದ್ಧಿ ಹೆಚ್ಚಿಸುವ ಗುರಿ ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಯುಪಿ ಬೋರ್ಡ್‌ನಲ್ಲಿ ಮಹಾಪುರುಷರ ಹೆಸರನ್ನು ಪಠ್ಯಕ್ಕೆ ಸೇರಿಸುವ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿತ್ತು ಎಂಬುದು ಗಮನಾರ್ಹ. ಯುಪಿ ಶಿಕ್ಷಣ ಮಂಡಳಿಯ ವಿಷಯ ತಜ್ಞರು ಕೆಲ ಸಮಯದ ಹಿಂದೆ ಮಹಾಪುರುಷರ ಹೆಸರುಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿದ್ದು, ನಂತರ ವಿನಾಯಕ ದಾಮೋದರ ಸಾವರ್ಕರ್ ಸೇರಿದಂತೆ 50 ಮಹನೀಯರ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಲು ಸರ್ಕಾರ ನಿರ್ಧರಿಸಿದೆ.