ಲಖನೌ (ಉತ್ತರ ಪ್ರದೇಶ): ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿರುವ ಉತ್ತರ ಪ್ರದೇಶ ತನಗೆ ಅಂಟಿದ್ದ ಮಾಫಿಯಾ ಟ್ಯಾಗ್ ಅನ್ನು ಯಶಸ್ವಿಯಾಗಿ ತೊಡೆದುಹಾಕಿದೆ ಮತ್ತು ಉದ್ಯಮ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಯುವ ಪೀಳಿಗೆಯಲ್ಲಿ ಹೊಸ ಭರವಸೆಯನ್ನು ಮೂಡಿಸುವ ತ್ವರಿತ ಕೈಗಾರಿಕಾ ಅಭಿವೃದ್ಧಿಗೆ ಮುಂದಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ. ಸದ್ಯ ಯೋಗಿ ಆದಿತ್ಯನಾಥ್ ಅತಿ ಹೆಚ್ಚು ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಮುಖ್ಯಮಂತ್ರಿಯಾಗಿ 6 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಬಿಜೆಪಿ ಆಡಳಿತದಲ್ಲಿ ಆರಂಭಿಸಿದ ಪ್ರಗತಿಪರ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ರಾಜ್ಯವು ಜಾತಿ, ಧರ್ಮ ಮತ್ತು ಸ್ವಜನಪಕ್ಷಪಾತದ ರಾಜಕೀಯವನ್ನು ತೊಡೆದುಹಾಕಿದೆ ಎಂದು ಶನಿವಾರ ಹೇಳಿದರು. ಈಗ ಉತ್ತರ ಪ್ರದೇಶ ಶಾಂತಿಯುತ ರಾಜ್ಯವಾಗಿದೆ ಮತ್ತು ಫೆಬ್ರವರಿಯಲ್ಲಿ ನಡೆದ ಇತ್ತೀಚಿನ ಜಾಗತಿಕ ಶೃಂಗಸಭೆಯ ಮೂಲಕ 35 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.
2017 ರಲ್ಲಿ ಬಿಜೆಪಿಯ ಮುಖ್ಯಮಂತ್ರಿ ಹುದ್ದೆಗೆ ಯೋಗಿ ಅನಿರೀಕ್ಷಿತವಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ ರಾಜ್ಯವು ಹಿಂಸಾಚಾರ ಮತ್ತು ಮಾಫಿಯಾ ಕಾರಣಕ್ಕೆ ಕುಖ್ಯಾತಿ ಪಡೆದಿತ್ತು. ತಮ್ಮ ಟೀಕಾಕಾರರು ಮತ್ತು ರಾಜಕೀಯ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುತ್ತ ಬಂದಿರುವ ಯೋಗಿ ಆದಿತ್ಯನಾಥ್ ಅವರು ಮಾರ್ಚ್ 25 ರಂದು ಸತತ ಆರು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದರು. ಯೋಗಿ ಅವರು 1954 ರಿಂದ 1960 ರವರೆಗೆ ಸೇವೆ ಸಲ್ಲಿಸಿದ ಕಾಂಗ್ರೆಸ್ನ ಆಗಿನ ಸಿಎಂ ಸಂಪೂರ್ಣಾನಂದರ ದಾಖಲೆಯನ್ನು ಮುರಿದರು.
2022ರಲ್ಲಿ ಮತ್ತೊಮ್ಮೆ ಬಿಜೆಪಿಗೆ ಬಹುಮತ ದೊರಕಿಸುವ ಮೂಲಕ ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ ಯೋಗಿ ಆದಿತ್ಯನಾಥ್. ಭಾರತದ ಅತ್ಯಂತ ಪೂಜನೀಯ ಹಾಗೂ ಪ್ರತಿಷ್ಠಿತ ದೇವಸ್ಥಾನಗಳಲ್ಲೊಂದಾಗಿರುವ ಗೋರಖ್ನಾಥ್ ಪೀಠದ ಮುಖ್ಯ ಅರ್ಚಕರಾಗಿರುವ ಯೋಗಿ ಆದಿತ್ಯನಾಥ್ ಅತ್ಯಂತ ಸಮರ್ಥ ಆಡಳಿತಗಾರನಾಗಿಯೂ ಯಶಸ್ಸು ಸಾಧಿಸಿರುವುದು ರಾಜಕೀಯ ವಿಶ್ಲೇಷಕರೇ ಅಚ್ಚರಿಪಡುವಂತಾಗಿದೆ.
ಯೋಗಿ ಆದಿತ್ಯನಾಥ್ ಯಶಸ್ವಿಯಾಗಿ ಆರು ವರ್ಷ ಸರ್ಕಾರ ನಡೆಸಿದ ನಂತರ, ಅವರ ರಾಜಕೀಯ ಮತ್ತು ಆಡಳಿತದ ಅನುಭವದ ಕೊರತೆಯ ಬಗ್ಗೆ ಮಾತನಾಡಿದ ಎಲ್ಲರೂ ಮೌನಕ್ಕೆ ಜಾರಿದ್ದಾರೆ. ಕ್ರಿಮಿನಲ್‌ಗಳು ಮತ್ತು ದರೋಡೆಕೋರರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಂಡಿರುವುದು ಮತ್ತು ಆ ಮೂಲಕ ಮಾಫಿಯಾಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಿರುವುದು ಯೋಗಿ ಆದಿತ್ಯನಾಥ್ ಅವರ ಬಹುದೊಡ್ಡ ಸಾಧನೆಯಾಗಿದೆ ಎಂದು ಹೇಳಲಾಗುತ್ತದೆ. ಒಂದೊಮ್ಮೆ ಕೀಳಾಗಿ ಬಿಂಬಿತವಾಗಿದ್ದ ರಾಜ್ಯವು ಈಗ ಬಂಡವಾಳ ಹೂಡಿಕೆಗೆ ಸ್ವಾಗತಾರ್ಹ ತಾಣವಾಗಿ ಮಾರ್ಪಟ್ಟಿರುವುದು ಸಣ್ಣ ಸಾಧನೆಯಲ್ಲ.
ಕಳೆದ ಆರು ವರ್ಷಗಳ ಯೋಗಿ ಆಡಳಿತದಲ್ಲಿ ನೂರಾರು ಎನ್‌ಕೌಂಟರ್‌ಗಳು ನಡೆದಿವೆ. ಇದರಲ್ಲಿ ಹಲವಾರು ಮಾಫಿಯಾ ಡಾನ್ಗಳನ್ನು ಕೊಲ್ಲಲಾಗಿದೆ. ನೂರಾರು ಮಾಫಿಯಾಗಳ ಮತ್ತು ಡಾನ್ಗಳ ಅಕ್ರಮ ಆಸ್ತಿಗಳನ್ನು ಕೆಡವಿ ಹಾಕಿದ್ದಕ್ಕಾಗಿ ಯೋಗಿ ಅವರಿಗೆ 'ಬುಲ್ಡೋಜರ್ ಬಾಬಾ' ಎಂದು ಕರೆಯಲಾಗುತ್ತದೆ. ಕಳೆದ ಆರು ವರ್ಷಗಳಲ್ಲಿ ರಾಜ್ಯದಲ್ಲಿ ಪೊಲೀಸರು ಮತ್ತು ಕ್ರಿಮಿನಲ್‌ಗಳ ನಡುವೆ ಸುಮಾರು ಹತ್ತು ಸಾವಿರ ಎನ್‌ಕೌಂಟರ್‌ಗಳು ನಡೆದಿವೆ ಮತ್ತು 63 ಕ್ಕೂ ಹೆಚ್ಚು ಅಪರಾಧಿಗಳನ್ನು ಸಾಯಿಸಲಾಗಿದೆ ಎಂದು ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶ ಸರ್ಕಾರ ತಿಳಿಸಿತ್ತು.
ಇದನ್ನೂ ಓದಿ : ದೇಶದ ಅಭಿವೃದ್ಧಿಗೆ ಉತ್ತರ ಪ್ರದೇಶದ ಕೊಡುಗೆ ಮಹತ್ತರ: ಪ್ರಧಾನಿ ಮೋದಿ