ಲಖನೌ(ಉತ್ತರಪ್ರದೇಶ):ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಸ್‌ಜಿಪಿಜಿಐ)ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುಪಿ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಕಳೆದ ಜುಲೈ 3, 2021ರಂದು ಕಲ್ಯಾಣ್ ಸಿಂಗ್ ಅವರ ಆರೋಗ್ಯ ಸ್ಥಿತಿಯು ಹದಗೆಟ್ಟ ಹಿನ್ನೆಲೆ ಮೊದಲು ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅತಿಯಾದ ಮಧುಮೇಹ, ತೀವ್ರ ಬ್ಯಾಕ್ಟೀರಿಯಾ ಸೋಂಕಿನ ಲಕ್ಷಣಗಳು ಇರುವ ಬಗ್ಗೆ ವೈದ್ಯರು ತಿಳಿಸಿದ್ದರು. ಅಲ್ಲದೆ ಉರಿಯೂತ ಮತ್ತು ಮೆದುಳಿನ ಸ್ಕ್ಯಾನ್ ನಡೆಸಿದಾಗ ರಕ್ತ ಹೆಪ್ಪುಗಟ್ಟುವಿಕೆಯೂ ಕೂಡ ಕಂಡು ಬಂದಿತ್ತು. ಇದಲ್ಲದೇ, ಸಣ್ಣ ಹೃದಯಾಘಾತದ ಲಕ್ಷಣಗಳೂ ಇದ್ದವು.
ಬಳಿಕ ಅವರನ್ನು ಜುಲೈ 4ರಂದು ಲೋಹಿಯಾ ಸಂಸ್ಥೆಯಿಂದ ಎಸ್‌ಜಿಪಿಜಿಐಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 19ರಂದು, ಕಲ್ಯಾಣ್ ಸಿಂಗ್ ಸ್ಥಿತಿ ಗಂಭೀರವಾದ ಕಾರಣ ಅವರ ಕುಟುಂಬ ಸದಸ್ಯರನ್ನು ಕೂಡ ಆಸ್ಪತ್ರೆಗೆ ಕರೆಸಿಕೊಳ್ಳಲಾಗಿತ್ತು.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರದೇವ್ ಸಿಂಗ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಲ್ಯಾಣ್ ಸಿಂಗ್ ಆರೋಗ್ಯದ ಬಗ್ಗೆ ನಿರಂತರ ಮಾಹಿತಿ ಪಡೆದುಕೊಳ್ಳುತ್ತಿದ್ದರು.
ಕಳೆದ 52 ದಿನಗಳಿಂದ ಸಿಂಗ್ ಅವರು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಅವರ ಮೂತ್ರಪಿಂಡದ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತಾದರೂ, ಮತ್ತೊಮ್ಮೆ ಸ್ಥಿತಿ ಗಂಭೀರವಾಗಿತ್ತು. ಸೋಂಕಿನಿಂದಾಗಿ ಅವರ ಶ್ವಾಸಕೋಶವೂ ಸಹ ಹದಗೆಟ್ಟಿತ್ತು. ಮೂತ್ರಪಿಂಡ ವೈಫಲ್ಯದಿಂದಾಗಿ ಡಯಾಲಿಸಿಸ್ ಕೂಡ ಮಾಡಲಾಗಿತ್ತು.