ಅಲಿಗಢ (ಯುಪಿ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಕಿರುಕುಳ ಕಾಯ್ದೆ ಅಡಿ ತಮ್ಮ ವಿರುದ್ಧ ಹತ್ತಕ್ಕೂ ಹೆಚ್ಚು ಸುಳ್ಳು ಪ್ರಕರಣಗಳು ದಾಖಲಾಗಿವೆ ಎಂದು ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯ ಕುಟುಂಬವೊಂದು ಆರೋಪಿಸಿದೆ. ಸುಳ್ಳು ಪ್ರಕರಣಗಳಿಂದ ನೊಂದಿರುವ ತಮಗೆ ದಯಾಮರಣ ನೀಡಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕುಟುಂಬ ಮನವಿ ಮಾಡಿದೆ. ಮುಖ್ಯಮಂತ್ರಿಗಳು ಈ ದಿನ ಅಲಿಗಢಕ್ಕೆ ಭೇಟಿ ನೀಡಲಿದ್ದಾರೆ.
ಕೊತ್ವಾಲಿ ಇಗ್ಲಾಸ್ ಪ್ರದೇಶದ ಹಸ್ತಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮುನ್ನಿದೇವಿ ಕುಟುಂಬದ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಮಸ್ಯೆ ಬಗೆಹರಿಸಲು ಈ ಹಿಂದೆ ಗ್ರಾಮದಲ್ಲಿ ಮಹಾಪಂಚಾಯತ್ ನಡೆಸಲಾಗಿತ್ತು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಆದರೆ, ಪೊಲೀಸರು ಮಧ್ಯಪ್ರವೇಶಿಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿ ಮಹಾಪಂಚಾಯತ್ ಸಭೆಯನ್ನು ವಿಸರ್ಜಿಸಿದರು. ಮಹಾಪಂಚಾಯತ್ ಆಯೋಜಿಸಿದ್ದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.