ಕಾನ್ಪುರ (ಉತ್ತರ ಪ್ರದೇಶ): ಅಮೆರಿಕದ ವಿಶೇಷ ಸೇನಾ ಪಡೆಯಿಂದ ಹತ್ಯೆಗೀಡಾದ ಅಲ್ ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್‌ನ ಭಾವಚಿತ್ರವನ್ನು ತನ್ನ ಕಚೇರಿಯಲ್ಲಿ ಅಳವಡಿಸಿ ಮತ್ತು ಆತನನ್ನು ಹೊಗಳಿದ್ದಕ್ಕಾಗಿ ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್ನ (ಯುಪಿಪಿಸಿಎಲ್) ಎಂಜಿನಿಯರ್‌ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ರವೀಂದ್ರ ಪ್ರಕಾಶ್ ಗೌತಮ್ ಎಂಬಾತನೇ ಅಮಾನತುಗೊಂಡ ಇಂಜಿನಿಯರ್.
ಯುಪಿಪಿಸಿಎಲ್ನ ಉಪವಿಭಾಗಾಧಿಕಾರಿಯಾಗಿದ್ದ ರವೀಂದ್ರ ಪ್ರಕಾಶ್ ಗೌತಮ್, ಕಳೆದ 2022ರ ಜೂನ್ ತಿಂಗಳಲ್ಲಿ ಫಾರೂಕಾಬಾದ್ ಜಿಲ್ಲೆಯ ಕಾಯಮ್ಗಂಜ್ನಲ್ಲಿರುವ ಉಪವಿಭಾಗ-IIರ ತನ್ನ ಕಚೇರಿಯಲ್ಲಿ ಉಗ್ರ ಒಸಾಮಾ ಬಿನ್ ಲಾಡೆನ್‌ನ ಭಾವಚಿತ್ರ ಹಾಕಿದ್ದರು ಎನ್ನಲಾಗಿದೆ. ಇದೀಗ ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ ಕೆಲಸದಿಂದ ತೆಗೆದುಹಾಕಿ ಯುಪಿಪಿಸಿಎಲ್ನ ಅಧ್ಯಕ್ಷ ಎಂ.ದೇವರಾಜ್ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ತನಿಖಾ ಸಮಿತಿಯು, ದೇಶವಿರೋಧಿ ಕೃತ್ಯದಲ್ಲಿ ತೊಡಗಿ, ಇಲಾಖೆಗೆ ಕಳಂಕ ತರುವ ಕೆಲಸ ಮಾಡಿರುವುದಾಗಿ ಅಭಿಪ್ರಾಯಪಟ್ಟಿದೆ.
ಕಳೆದ ವರ್ಷ ಅಮಾನತುಗೊಂಡ ಗೌತಮ್ನ ಕಾಯಮ್‌ಗಂಜ್ ಕಚೇರಿಯಲ್ಲಿ ಒಸಾಮಾ ಬಿನ್ ಲಾಡೆನ್‌ನ ಚಿತ್ರವನ್ನು ತೂಗು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರೋಪಿಯು ಈ ಭಾವಚಿತ್ರಕ್ಕೆ ಗೌರವಾನ್ವಿತ ಒಸಾಮಾ ಬಿನ್ ಲಾಡೆನ್, ವಿಶ್ವದ ಅತ್ಯುತ್ತಮ ಇಂಜಿನಿಯರ್ ಎಂದು ಅಡಿಬರಹ ಬರೆದಿದ್ದ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಆತನ ಸಹೊದ್ಯೋಗಿಗಳು, ಗೌತಮ್ ಇಂಜಿನಿಯರಿಂಗ್ ಪದವಿ ಹೊಂದಿದ್ದರಿಂದ ಮೋಸ್ಟ್ ವಾಂಟೆಡ್ ಉಗ್ರ ಒಸಾಮಾ ಬಿನ್ ಲಾಡೆನ್ನ್ನು ಆರಾಧಿಸುತ್ತಿದ್ದ ಎಂದು ಹೇಳಿದ್ದಾರೆ. ಅಲ್ಲದೇ ಗೌತಮ್ ಕೂಡ ಈ ವಿಡಿಯೋ ನಿಜವೆಂದು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ :ಗುರುದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಅಮೃತ್‌ಪಾಲ್ ಬೆಂಬಲಿಗರು: ಪ್ರತಿಭಟನೆ ತೆರವುಗೊಳಿಸಿದ ಪಂಜಾಬ್ ಪೊಲೀಸ್