ಮಥುರಾ (ಉತ್ತರ ಪ್ರದೇಶ) : ಉತ್ತರ ಪ್ರದೇಶದ ಮಥುರಾ ಜಂಕ್ಷನ್‌ನಲ್ಲಿ ಕಳೆದ ತಡರಾತ್ರಿ ರೈಲು ಅಪಘಾತ ಸಂಭವಿಸಿದೆ. ಶಕುರ್ ಬಸ್ತಿಯಿಂದ ಬರುತ್ತಿದ್ದ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಇಎಂಯು) ರೈಲು ಹಠಾತ್ತನೆ ಹಳಿ ಬಿಟ್ಟು ಮಥುರಾ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಹತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಮಾಹಿತಿ ಪ್ರಕಾರ, ಈ ಇಎಂಯು ರೈಲು ಶಕುರ್ ಬಸ್ತಿಯಿಂದ ಬರುತ್ತಿತ್ತು. ರಾತ್ರಿ 10:49 ರ ಸುಮಾರಿಗೆ ಮಥುರಾ ಜಂಕ್ಷನ್ ತಲುಪಿದೆ. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಕೆಳಗಿಳಿದಿದ್ದಾರೆ. ಬಳಿಕ ರೈಲು ಹಳಿಯಿಂದ ದೂರ ಸ್ವಲ್ಪ ದೂರ ಸರಿದು ಪ್ಲಾಟ್‌ಫಾರ್ಮ್ ಮೇಲೆ ಏರಿದೆ. ಪರಿಣಾಮ, ಪ್ಲಾಟ್‌ಫಾರ್ಮ್ ಮುರಿದು ಹೋಗಿದೆ. ರೈಲಿನ ಕೆಲವು ಭಾಗಗಳಿಗೆ ಹಾನಿಯಾಗಿದೆ. ಘಟನೆಯಿಂದಾಗಿ ಈ ಮಾರ್ಗದ ಮೂಲಕ ಹಾದು ಹೋಗುವ ಮಾಲ್ವಾ ಎಕ್ಸ್‌ಪ್ರೆಸ್ ಸೇರಿದಂತೆ ಇತರೆ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಅವಘಡ ಸಂಭವಿಸಿದ ಬಳಿಕ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಜನರು ಭಯಭೀತರಾಗಿ ಅತ್ತಿತ್ತ ಓಡಲಾರಂಭಿಸಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಮಥುರಾ ರೈಲು ನಿಲ್ದಾಣದ ನಿರ್ದೇಶಕ ಎಸ್.ಕೆ.ಶ್ರೀವಾಸ್ತವ, "ಶಕುರ್ ಬಸ್ತಿಯಿಂದ ರೈಲು ಬಂದು ಜಂಕ್ಷನ್‌ನಲ್ಲಿ ನಿಂತಿತ್ತು. ಈ ವೇಳೆ ಎಲ್ಲಾ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದಿದ್ದರು. ನಂತರ ರೈಲು ಇದ್ದಕ್ಕಿದ್ದಂತೆ ಹಳಿ ಬಿಟ್ಟು ಪ್ಲಾಟ್‌ಫಾರ್ಮ್‌ಗೆ ಹತ್ತಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಘಟನೆಯಿಂದಾಗಿ ಮೇಲಿನ ಪ್ಲಾಟ್‌ಫಾರ್ಮ್ ಮತ್ತು ಶೆಡ್‌ಗೆ ಹಾನಿಯಾಗಿದೆ. ಕೆಲ ವಾಹನಗಳಿಗೂ ತೊಂದರೆಯಾಗಿದೆ" ಎಂದು ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ :Watch : ಇಂಜಿನ್ ಇಲ್ಲದೆ ಹಳಿ ಮೇಲೆ ಚಲಿಸಿದ ರೈಲು ಬೋಗಿ-ವಿಡಿಯೋ