ಜೌನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಹದಿಹರೆಯದ ದಲಿತ ಯುವಕನೊಬ್ಬನಿಗೆ ಮೂವರು ಯುವಕರ ಗುಂಪೊಂದು ಥಳಿಸಿ, ಮೂತ್ರ ಕುಡಿಸಿದೆ. ಅಲ್ಲದೇ, ದುಷ್ಕರ್ಮಿಗಳು ಯುವಕನ ಹುಬ್ಬುಗಳನ್ನು ಕಿತ್ತು, ಬಾಯಿಗೆ ಮಣ್ಣು ಕೂಡ ತುಂಬಿದ್ದಾರೆ. ನಂತರ ಬಾಲಕನ ತಂದೆಗೆ ಕರೆ ಮಾಡಿ, ಬರಹೇಳಿ ಆತನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿನ ಸುಜನ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಸದ್ಯ ಈ ಬಗ್ಗೆ ಬಾಲಕನ ತಂದೆ ಮತ್ತು ಯುವಕರು ಪರಸ್ಪರ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಬಾಲಕನ ತಂದೆ ಹಲ್ಲೆ ಮತ್ತು ಅಮಾನವೀಯ ವರ್ತನೆಯ ಬಗ್ಗೆ ದೂರು ನೀಡಿದರೆ, ಯುವಕರು ತಮ್ಮ ಸಂಬಂಧಿ ಯುವತಿಗೆ ಕಿರುಕುಳ ನೀಡಿದ ಆರೋಪವನ್ನು ಮಾಡಿದ್ದಾರೆ. ಎರಡೂ ಕಡೆಯವರಿಂದ ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ, ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದಿದ್ದೇನು?:ಶೇಖ್‌ಪುರ ಖುಥಾನಿ ಗ್ರಾಮದ ಪೆಟ್ರೋಲ್ ಪಂಪ್ ಬಳಿ ಸೈಕಲ್‌ನಲ್ಲಿ ಸಂತ್ರಸ್ತ ಯುವಕ ತೆರಳುತ್ತಿದ್ದ. ಈತ ತನ್ನ ಸ್ನೇಹಿತನನ್ನು ಸೈಕಲ್‌ನಲ್ಲಿ ಮನೆಗೆ ಬಿಟ್ಟು ಹಿಂದಿರುಗುತ್ತಿದ್ದ. ಈ ವೇಳೆ ಮೂರ್ನಾಲ್ಕು ಯುವಕರು ತಡೆದಿದ್ದಾರೆ. ಅಲ್ಲಿಯೇ ಬಾಲಕನನ್ನು ನಿಂದಿಸಿ ಥಳಿಸಿದ್ದಾರೆ. ನಂತರ, ಅಲ್ಲಿಂದ ಆತನನ್ನು ಹತ್ತಿರದ ಕೊಳದ ಕಡೆಗೆ ಎಳೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿದ್ದಾರೆ.