ಅಯೋಧ್ಯೆ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ನಾಗರಿಕ ಸಾಮಾಜ ತಲೆ ತಗ್ಗಿಸುವ ಹಾಗೂ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತಂದೆಯೋರ್ವ ಸ್ವಂತ ಮಗಳ ಮೇಲೆಯೇ ಬಲಾತ್ಕಾರಕ್ಕೆ ಯತ್ನಿಸಿದ್ದು, ಇದನ್ನು ತಡೆಯಲು ಮುಂದಾದ 17 ವರ್ಷದ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಸಾಯಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಆರೋಪಿಯ ಪತ್ನಿ ತುಂಬಾ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ತನ್ನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನೊಂದಿಗೆ ವಾಸವಾಗಿದ್ದ. ರವಿವಾರ ರಾತ್ರಿ ಹಿರಿಮಗಳ ಮೇಲೆ ಪಾಪಿ ತಂದೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಎಚ್ಚರಗೊಂಡ ಮಗ ತಂದೆಯನ್ನು ತಡೆಯಲು ಮುಂದಾಗಿದ್ದಾನೆ. ತಂದೆ ಹಾಗೂ ಮಗ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ದವಡೆಗೆ ತಲುಗಿದ್ದು, ತೀವ್ರ ರಕ್ತಸ್ರಾವವಾಗಿದೆ. ನಂತರ ಆರೋಪಿ ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾತ್ರಿ 8 ಕಿ.ಮೀ ನಡೆದುಕೊಂಡೇ ಆಸ್ಪತ್ರೆಗೆ ತಲುಪಿದ ಸೋದರ-ಸೋದರಿ: ಗುಂಡೇಟಿನ ಪರಿಣಾಮ ತೀವ್ರ ರಕ್ತಸ್ರಾವ ಆಗಿರುವುದರಿಂದ ಸಹೋದರಿ, ಬಾಲಕನ ಮುಖಕ್ಕೆ ಬಿಗಿಯಾಗಿ ಟವೆಲ್ ಕಟ್ಟಿದ್ದಾಳೆ. ರಾತ್ರಿಯೇ ಸರಿಸುಮಾರು 8 ಕಿಲೋ ಮೀಟರ್ ದೂರ ನಡೆದುಕೊಂಡೇ ಸಾಗಿದ ಇಬ್ಬರು ಮಾಯಾಬಜಾರ್ ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಿದ್ದಾರೆ. ಗಾಯಾಳುವಿನ ಪರಿಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿಂದ ದರ್ಶನ್ ನಗರದ ಮೆಡಿಕಲ್ ಕಾಲೇಜಿಗೆ ರವಾನಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ರಾಜಧಾನಿ ಲಖನೌದ ಟ್ರಾಮಾ ಸೆಂಟರ್ಗೆ ಕಳುಹಿಸಲಾಗಿದೆ. ಇದೀಗ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಅಯೋಧ್ಯೆ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಸೋಂಕರ್ ಪ್ರತಿಕ್ರಿಯಿಸಿ, ''ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿ ತಂದೆ ತಲೆಮರೆಸಿಕೊಂಡಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಗಾಯಾಳು ಬಾಲಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ'' ಎಂದರು.