ಲಖನೌ (ಉತ್ತರ ಪ್ರದೇಶ):ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಭುಗಿಲೆದ್ದಿರುವ ಬೆನ್ನಲ್ಲೇ ಸಾಲು ಸಾಲು ಪರಿಹಾರ ಯೋಜನೆಗಳನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಘೋಷಿಸುತ್ತಿದೆ. ಇದೀಗ ಕೊರೊನಾದಿಂದ ಗಂಡಂದಿರನ್ನು ಕಳೆದುಕೊಂಡು ವಿಧವೆಯಾದ ರಾಜ್ಯದ ಮಹಿಳೆಯರಿಗೆ ನೆರವು ನೀಡಲು ಯುಪಿ ಸರ್ಕಾರ ಮುಂದಾಗಿದೆ.
ಈ ಪರಿಹಾರವು ಉದ್ಯೋಗ, ಕೌಶಲ್ಯ ಅಭಿವೃದ್ಧಿ, ಆರ್ಥಿಕ ಸಹಾಯ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಸೌಲಭ್ಯಗಳನ್ನು ಒಳಗೊಂಡಿದೆ. ರಾಜ್ಯದ ಎಲ್ಲ ಪಂಚಾಯಿತಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ವಿಧವೆಯರ ಸಮಸ್ಯೆ ಆಲಿಸಿ, ಪಿಂಚಣಿ ಸೇರಿದಂತೆ ಅಗತ್ಯ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಸೂಚಿಸಿದ್ದಾರೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಯೋಜನೆಗಳನ್ನು ರೂಪಿಸಲು ನಿರ್ದೇಶಿಸಲಾಗಿದೆ.