ಡೆಹ್ರಾಡೂನ್:(ಉತ್ತರಾಖಂಡ):ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇ 3ರಿಂದ 5ರವರೆಗೆ ಉತ್ತರಾಖಂಡ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ, ತಮ್ಮ ಹುಟ್ಟೂರಾದ ಪೌರಿ ಗಡ್ವಾಲ್ ಜಿಲ್ಲೆಯಲ್ಲಿರುವ ಪಂಚೂರಿಗೆ ಬರಲಿದ್ದು ಆಗ ತಾಯಿ, ಸಹೋದರಿಯನ್ನು ಭೇಟಿ ಮಾಡಲಿದ್ದಾರೆ.
ಈ ಹಿಂದೆ ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಪ್ರಮಾಣವಚನದ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಲು ಅವರ ಕುಟುಂಬಸ್ಥರು ಇಚ್ಚಿಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದಲ್ಲದೇ, ಯೋಗಿ ಆದಿತ್ಯನಾಥ್ ಅವರ ಸಹೋದರ ಅನಾರೋಗ್ಯಕ್ಕೀಡಾಗಿದ್ದರೂ ಭೇಟಿ ಮಾಡಿರಲಿಲ್ಲ. ಇದೀಗ ಯೋಗಿ ಕುಟುಂಬಸ್ಥರನ್ನು ಕಾಣಲು ಅವರ ಹುಟ್ಟೂರಿಗೆ ತೆರಳಲಿದ್ದಾರೆ.
ತಂದೆ ಮೃತಪಟ್ಟಿದ್ದರೂ ಹೋಗಿಲ್ಲ:ಯೋಗಿ ಆದಿತ್ಯನಾಥ್ ಅವರ ತಂದೆ 2020 ರಲ್ಲಿ ಕೋವಿಡ್ ವೇಳೆ ಮೃತಪಟ್ಟಿದ್ದರು. ಅಂತ್ಯಕ್ರಿಯೆಗೂ ಯೋಗಿ ಬಂದಿರಲಿಲ್ಲ. ಇದಾದ ಬಳಿಕ ತನ್ನ ಹೆತ್ತ ತಾಯಿಯನ್ನೂ ಯೋಗಿ ಭೇಟಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರವಾಸದ ವೇಳೆ ತಮ್ಮ ಕುಟುಂಬಸ್ಥರು ನೆಲೆಸಿರುವ ಪಂಚೂರಿ ಗ್ರಾಮಕ್ಕೆ ಭೇಟಿ ನೀಡಿ ತಾಯಿ, ಸಹೋದರಿ ಕುಟುಂಬಸ್ಥರ ಜೊತೆ ಬೆರೆಯಲಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಕುಟುಂಬಸ್ಥರು ತುಂಬಾ ಸರಳವಾಗಿ ಜೀವನ ಸಾಗಿಸುತ್ತಿದ್ದಾರೆ. ಯೋಗಿ ಆದಿತ್ಯನಾಥ್ ರಾಜ್ಯವೊಂದರ ಮುಖ್ಯಮಂತ್ರಿಯಾಗಿದ್ದರೂ ಅವರಿಂದ ಯಾವುದೇ ಸಹಾಯ ಪಡೆಯದ ಈ ಕುಟುಂಬ ಸ್ವಾಭಿಮಾನಿ ಜೀವನ ನಡೆಸುತ್ತಿದೆ. ಅವರ ಸಹೋದರಿ ಶಶಿ ಪೌರಿ ಅವರು ಗರ್ವಾಲ್‌ನಲ್ಲಿರುವ ನೀಲಕಂಠ ದೇವಸ್ಥಾನದಲ್ಲಿ ಚಹಾ ಅಂಗಡಿಯನ್ನು ನಡೆಸುತ್ತಿದ್ದಾರೆ.
ಓದಿ:ಪತ್ನಿ ಮೇಲಿನ ಪ್ರೀತಿಗಾಗಿ 50 ವರ್ಷದ ಹಳೆಯ ಸ್ಕೂಟರ್ ಆಯ್ತು 'ಸೂಪರ್ ಸ್ಕೂಟರ್'