ಲಖನೌ(ಉತ್ತರ ಪ್ರದೇಶ):2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.
ಹೊಸ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೂ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕಾರ ಮಾಡುವುದು ಬಹುತೇಕ ಖಾತ್ರಿಯಾಗಿದ್ದು, ಪ್ರಧಾನಿ ಮೋದಿ ಹಸಿರು ನಿಶಾನೆಗೋಸ್ಕರ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ದೊರೆತಿರುವ ಮಾಹಿತಿ ಪ್ರಕಾರ, ಪ್ರಧಾನಿ ಮೋದಿಗೆ ಯೋಗಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲು ಸಮಯದ ಕೊರತೆ ಇದೆ. ಹೀಗಾಗಿ, ಮಾರ್ಚ್ 23 ಅಥವಾ 24ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಕಾಣುತ್ತಿದೆ. ಅದ್ಧೂರಿ ಸಮಾರಂಭಕ್ಕಾಗಿ ಲಖನೌದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದ್ದು, ಪಕ್ಷದಿಂದ ಪ್ರಮಾಣ ವಚನ ಸ್ವೀಕಾರ ದಿನಾಂಕ ಮಾತ್ರ ಅಧಿಕೃತವಾಗಿಲ್ಲ.
2024ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಸಚಿವ ಸ್ಥಾನ ಹಂಚಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಯೋಗಿ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ನೋಡದವರನ್ನು ಜೈಲಿಗಟ್ಟುವ ಕಾನೂನು ತನ್ನಿ: ಯಶವಂತ್ ಸಿನ್ಹಾ ವ್ಯಂಗ್ಯ
ಸಮಯ ಸಿಕ್ಕರೆ ಮಾರ್ಚ್ 22 ಅಥವಾ 23ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ನಿರ್ಧರಿಸಲಾಗಿದ್ದು, ಇದು ಸಾಧ್ಯವಾಗದೇ ಹೋದರೆ ಮಾರ್ಚ್ 24ರಂದು ಸಮಾರಂಭ ಆಯೋಜನೆಯಾಗಲಿದೆ.
ಮಾರ್ಚ್ 21 ಅಥವಾ 22ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ. ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರ ಹೆಸರು ಅಂತಿಮಗೊಂಡಿರುವ ಕಾರಣ, ಈ ಸಭೆ ಔಪಚಾರಿಕವಾಗಿ ನಡೆಯಲಿದೆ.