ಮಹಾರಾಜ್‌ಗಂಜ್ (ಉತ್ತರ ಪ್ರದೇಶ):ಪ್ರೀತಿ ಎರಡು ಮನುಸುಗಳ ಮಧ್ಯೆ ಒಪ್ಪಿಗೆಯಿಂದ ಮೂಡಬೇಕು. ಒಬ್ಬರಿಗೆ ಇನ್ನೊಬ್ಬರ ಮೇಲೆ ಪ್ರೀತಿಯ ಭಾವನೆ ಇದೆ ಎಂದಮಾತ್ರಕ್ಕೆ ಅವರೂ ಕೂಡ ನಮ್ಮನ್ನು ಪ್ರೀತಿಸಬೇಕೆಂದೇನೂ ಇಲ್ಲ. ಯುಪಿಯ ಮಹಾರಾಜ್ಗಂಜ್ನಲ್ಲಿ ನಡೆದ ಘಟನೆಯ ವರದಿ ಇಲ್ಲಿದೆ. ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿಸಿದ 8ನೇ ತರಗತಿಯ ಬಾಲಕನೊಬ್ಬ 6ನೇ ತರಗತಿಯ ಬಾಲಕಿಯ ಮನೆಗೆ ನುಗ್ಗಿ ಬಲವಂತವಾಗಿ ಆಕೆಯ ಹಣೆಗೆ ಕುಂಕುಮವಿಟ್ಟಿದ್ದಾನೆ.
ಚಾಕುವಿನಿಂದ ಬೆದರಿಸಿ ಬಾಲಕಿ ಹಣೆಗೆ ಸಿಂಧೂರವಿಟ್ಟ 16ರ ಪೋರ! - ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ 2012
ವಿದ್ಯೆ ಕಲಿಯುವ ವಯಸ್ಸಲ್ಲಿ ಪ್ರೀತಿ, ಪ್ರೇಮ ಅಂತ ಬದುಕು ಹಾಳು ಮಾಡಿಕೊಂಡ ಹುಡುಗರ ಅನೇಕ ಉದಾಹರಣೆಗಳಿವೆ. ಇಂಥ ಘಟನೆಗಳಿಗೆ ಹೊಸ ನಿದರ್ಶನವೆಂಬಂತೆ ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಇನ್ನೂ ವಯಸ್ಸು 16. ಅಷ್ಟರಲ್ಲೇ ಪ್ರೀತಿ ಅಂತ ಬಾಲಕಿಗೆ ಚಾಕು ತೋರಿಸಿ ಹಣೆಗೆ ಸಿಂಧೂರವಿಟ್ಟಿದ್ದಾನೆ.
14 ವರ್ಷದ ಬಾಲಕಿ ತನ್ನ ಮನೆಯಲ್ಲಿ ನೆಲ ಗುಡಿಸುತ್ತಿದ್ದಳು. ಈ ಸಂದರ್ಭದಲ್ಲಿ ಆರೋಪಿ ಬಾಲಕ ತನ್ನ ಸ್ನೇಹಿತನೊಂದಿಗೆ ಏಕಾಏಕಿ ಮನೆಗೆ ನುಗ್ಗಿ, ಬಾಲಕಿಯ ಕತ್ತಿನ ಮೇಲೆ ಚಾಕು ಇರಿಸಿ ಹಣೆಗೆ ಕುಂಕುಮ ಹಚ್ಚಿ ಪರಾರಿಯಾಗಿದ್ದಾನೆ. ಬಾಲಕಿಯ ತಂದೆ ಚಾಲಕರಾಗಿದ್ದು ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಇದರ ನಂತರ, ತಂದೆ ಆರೋಪಿ ಬಾಲಕರ ವಿರುದ್ಧ ಪ್ರಾಣ ಬೆದರಿಕೆ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆರೋಪಿ ಅಪ್ರಾಪ್ತನಾಗಿದ್ದು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಬಾಲಾಪರಾಧಿಗೃಹದಲ್ಲಿ ಇರಿಸಲಾಗಿದೆ. ಇಷ್ಟೆಲ್ಲಾ ಆದ ಬಳಿಕವೂ ಬಾಲಕ ಮಾತ್ರ ಇನ್ನೂ ತಾನು ಆ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಮತ್ತು ಮದುವೆಯಾಗಲು ಇಚ್ಚಿಸಿದ್ದೇನೆ ಎಂದಿದ್ದಾನೆ ಎಂದು ಅವರು ತಿಳಿಸಿದ್ದಾರೆ. ತನಿಖೆಯ ವೇಳೆ ಮತ್ತೊಂದು ವಿಚಾರವೂ ಗೊತ್ತಾಗಿದೆ. ಬಾಲಕ ಕಳೆದ ಮೂರು ತಿಂಗಳಿನಿಂದ ಬಾಲಕಿಯನ್ನು ಹಿಂಬಾಲಿಸಿ ಪ್ರಪೋಸ್ ಮಾಡುವ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದನಂತೆ. ಈ ವಿಷಯ ತಿಳಿದ ಬಾಲಕಿಯ ಪೋಷಕರು ಆಕೆಯನ್ನು ಬೇರೆ ಶಾಲೆಗೆ ಸೇರಿಸಿದ್ದರು. ಆದರೆ ಇದುವರೆಗೆ ಈ ಕುರಿತು ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.