ಪ್ರಯಾಗ್ರಾಜ್(ಉತ್ತರಪ್ರದೇಶ) : ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ನ ಮಗ ಅಸದ್ ಅಹ್ಮದ್ನನ್ನು ಉತ್ತರ ಪ್ರದೇಶ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ತಂಡ ಎನ್ಕೌಂಟರ್ ಮಾಡಿದೆ. ಹತ್ಯೆ ಬಳಿಕ ಎಟಿಎಸ್ ತಂಡವು ಲಷ್ಕರ್-ಎ-ತೊಯ್ಬಾ ಮತ್ತು ಪಾಕಿಸ್ತಾನದ ಐಎಸ್‌ಐನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಇರುವ ಲಿಂಕ್ ಕುರಿತು ಅತೀಕ್ ಮತ್ತು ಅವನ ಸಹೋದರ ಅಶ್ರಫ್ ಇಬ್ಬರ ವಿಚಾರಣೆಯನ್ನೂ ಚುರುಕುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಗುಜರಾತಿನ ಸಬರಮತಿ ಜೈಲಿನಲ್ಲಿದ್ದ ದರೋಡೆಕೋರ ಅತೀಕ್‌ನ ಮೂರನೇ ಮಗ ಅಸಾದ್‌ನನ್ನು ಯುಪಿ ಎಸ್‌ಟಿಎಫ್ (ಸ್ಟೇಟ್ ಟಾಸ್ಕ್ ಫೋರ್ಸ್) ಗುರುವಾರ ಎನ್ಕೌಂಟರ್ ನಡೆಸಿ ಕೊಂದು ಹಾಕಿತ್ತು. ಇದೀಗ, ಅತೀಕ್‌ಗೆ ಕೂಡ ಕುಣಿಕೆ ಬಿಗಿಗೊಳಿಸುತ್ತಿದೆ. ಶುಕ್ರವಾರ ಸಂಜೆ ಪ್ರಯಾಗರಾಜ್‌ನ ಧುಮನ್‌ಗಂಜ್ ಪೊಲೀಸ್ ಠಾಣೆಗೆ ಆಮಿಸಿದ್ದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಅತೀಕ್ ಅಹ್ಮದ್ ಮತ್ತು ಅಶ್ರಫ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು.
ಕೆಲ ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಗುರುವಾರ ಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದು ಮಾಫಿಯಾ ಸಹೋದರರಾದ ಅತೀಕ್ ಮತ್ತು ಅಶ್ರಫ್‌ನನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ರಿಮಾಂಡ್ ಅರ್ಜಿಯ ಪ್ರಕಾರ, ಅತೀಕ್ ಮತ್ತು ಅಶ್ರಫ್ ಪಾಕಿಸ್ತಾನದಿಂದ ಪಂಜಾಬ್ ಮೂಲಕ ಡ್ರೋನ್‌ಗಳ ಸಹಾಯದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಡೆಯುತ್ತಿದ್ದರು ಎಂದು ತಿಳಿಸಿದೆ.
ಇದರೊಂದಿಗೆ, ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜತೆ ಅತೀಕ್ ಗ್ಯಾಂಗ್ ನಂಟು ಹೊಂದಿರುವ ವಿಷಯವೂ ಹೊರಬಿದ್ದಿದೆ. ಈ ಬಗ್ಗೆ ತನಿಖೆ ನಡೆಸಲು ಎಟಿಎಸ್ ತಂಡ ಪ್ರಯಾಗ್ರಾಜ್ಗೆ ತೆರಳಿದೆ. ಈ ತಂಡವು ಪೊಲೀಸ್ ಕಸ್ಟಡಿಯಲ್ಲಿರುವ ಅತೀಕ್ ಮತ್ತು ಅಶ್ರಫ್ ಅವರನ್ನು ವಿಚಾರಣೆಗೆ ಒಳಪಡಿಸಿದೆ.