ಲಖನೌ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿ ಸೇನೆಯ ಸೂಕ್ಷ್ಮ ಮಾಹಿತಿಯನ್ನು ನೆರೆಯ ದೇಶದ ಗುಪ್ತಚರ ಸಂಸ್ಥೆಯೊಂದಿಗೆ ಹಂಚಿಕೊಂಡ ಆರೋಪದ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಈ ಹಿಂದೆ ಮಾಜಿ ಸೈನಿಕನನ್ನು ಬಂಧಿಸಿತ್ತು. ಈಗ ಮತ್ತೆ ಗೋಧ್ರಾ ಮೂಲದ ಮಹಿಳೆಯನ್ನು ಬಂಧಿಸಿದೆ.
ಹಾಪುರ ಜಿಲ್ಲೆಯ ಬಹದ್ದೂರ್‌ಗ್ರಹ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಹೂನಿ ಗ್ರಾಮದ ಸೌರಭ್ ಶರ್ಮಾ ಎನ್ನುವ ಮಾಜಿ ಸೈನಿಕ ಸೈನ್ಯದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ರವಾನಿಸುತ್ತಿದ್ದಾನೆ ಎಂಬ ಸುಳಿವು ಸಿಕ್ಕ ನಂತರ ಎಟಿಎಸ್ ಈತನನ್ನು ಬಂಧಿಸಿತ್ತು.
ಈತನ ಮೇಲೆ ಅಧಿಕೃತ ರಹಸ್ಯ ಕಾಯ್ದೆ (ಒಎಸ್ಎ), ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಮತ್ತು ಐಪಿಸಿ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನ ಬಂಧನದ ನಂತರ, ಈತ ಬಾಯ್ಬಿಟ್ಟ ಮಾಹಿತಿ ಪ್ರಕಾರ ಮತ್ತೊಬ್ಬ ಮಹಿಳೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಪಾಕಿಸ್ತಾನಿ ಮಹಿಳೆಯೊಬ್ಬರಿಗೆ ಹಣಕ್ಕಾಗಿ ಮಾಹಿತಿಯನ್ನು ರವಾನಿಸುತ್ತಿದ್ದನಂತೆ. ಈ ಹಿನ್ನೆಲೆ ಟಿಎಸ್ ತಂಡವು ಮಹಿಳೆಯನ್ನು ಬಂಧಿಸಿದೆ. ಬಂಧಿತ ಮಹಿಳೆಯನ್ನು ಗುಜರಾತ್‌ನ ಗೋಧ್ರಾದ ಪಂಚಮಹಲ್ ನಿವಾಸಿ ಅನಸ್ ಗೀತೌಲಿ ಎಂದು ಗುರುತಿಸಲಾಗಿದೆ.
ಪ್ರಮುಖ ವಿಷಯ ಅಂದರೆ ಪಾಕಿಸ್ತಾನದ ಐಎಸ್‌ಐಗಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಕಳೆದ ವರ್ಷದ ಸೆಪ್ಟೆಂಬರ್ 14ರಂದು ಗೀತೌಲಿ ಹಿರಿಯ ಸಹೋದರ ಇಮ್ರಾನ್ ಗೀತೌಲಿಯನ್ನು ಬಂಧಿಸಲಾಗಿತ್ತು.