ನವದೆಹಲಿ: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು.
ಪಟ್ಟಿಯಲ್ಲಿ ಮೊದಲ ಹೆಸರು ಯೋಗಿ ಆದಿತ್ಯನಾಥ್ ಅವರದ್ದು, ಅವರು ತಮ್ಮ 'ಮನೆ' ಅಂದರೆ ಗೋರಖ್‌ಪುರ ನಗರ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಪ್ರಯಾಗರಾಜ್ ಜಿಲ್ಲೆಯ ಸಿರಾಥುದಿಂದ ಯುಪಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮತ್ತೊಬ್ಬ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಕೂಡ ಲಖನೌ ಕ್ಷೇತ್ರದಿಂದ ಕಣದಲ್ಲಿದ್ದಾರೆ ಎಂದು ಅರುಣ್ ಸಿಂಗ್ ಪ್ರಕಟಿಸಿದ್ದಾರೆ.
ಈ ಮೊದಲು ಯೋಗಿ ಆದಿತ್ಯನಾಥ್ ಅವರು ರಾಮ ಜನ್ಮಭೂಮಿ 'ಅಯೋಧ್ಯಾ' ಅಥವಾ ಕೃಷ್ಣಜನ್ಮ ಭೂಮಿ 'ಮಥುರಾ'ದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಆ ಎಲ್ಲ ವದಂತಿಗಳಿಗೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ. ಗೋರಖ್‌ಪುರ ನಗರ ಕ್ಷೇತ್ರದಿಂದ ಯೋಗಿ ಕಣಕ್ಕಿಳಿಯಲಿದ್ದಾರೆ ಎಂದು ಘೋಷಿಸಿದೆ.
ಓದಿ:ಭಾರತ-ಚೀನಾ ನಡುವೆ 14ನೇ ಸುತ್ತಿನ ಮಿಲಿಟರಿ ಮಾತುಕತೆ : ಲಡಾಖ್ ಬಿಕ್ಕಟ್ಟು ಸುಧಾರಿಸಿದೆ ಎಂದ ಸೇನಾ ಮುಖ್ಯಸ್ಥ
ಮೊದಲ ಹಂತಕ್ಕೆ 57 ಅಭ್ಯರ್ಥಿಗಳು ಮತ್ತು ಎರಡನೇ ಹಂತಕ್ಕೆ 48 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು. ಸಾಮಾನ್ಯ ಸ್ಥಾನದಲ್ಲೂ ಪರಿಶಿಷ್ಟ ಜಾತಿಗೆ ಸೇರಿದವರೇ ಸ್ಪರ್ಧಿಸಲಿದ್ದಾರೆ ಎಂದು ಇದೇ ವೇಳೆ ಅವರು ಘೋಷಿಸಿದರು.
ಅಯೋಧ್ಯೆ, ಮಥುರಾದಿಂದ ಯೋಗಿ ಸ್ಪರ್ಧೆ ಯಾಕಿಲ್ಲ?
ಗೋರಖ್‌ಪುರ ನಗರ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. 1967ರ ನಂತರ ನಡೆದ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ (ಆಗ ಭಾರತೀಯ ಜನಸಂಘ) ಸೋಲಲೇ ಇಲ್ಲ. ಈ ಹಿಂದಿನ ನಾಲ್ಕು ಚುನಾವಣೆಗಳಲ್ಲಿ (2002, 2007, 2012 ಮತ್ತು 2017) ರಾಧಾ ಮೋಹನ್ ದಾಸ್ ಅಗರ್ವಾಲ್ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಅವರಿಗೆ ಟಿಕೆಟ್ ನೀಡಿಲ್ಲ. ಗೋರಖ್ಪುರದಲ್ಲಿ ಯೋಗಿ ಅವರನ್ನು ಕಣಕ್ಕಿಳಿಸುವ ಮೂಲಕ ಗೋರಖ್‌ಪುರ-ಬಸ್ತಿ ವ್ಯಾಪ್ತಿಯ 41 ಕ್ಷೇತ್ರಗಳಲ್ಲೂ ವಿಜಯ ಪತಾಕೆ ಹಾರಿಸುವುದು ಬಿಜೆಪಿಯ ಉದ್ದೇಶವಾಗಿದೆ. 2017ರಲ್ಲಿ ನಡೆದ ಚುನಾವಣೆಯಲ್ಲಿ 41 ಸೀಟುಗಳ ಪೈಕಿ ಬಿಜೆಪಿ 38 ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಗೋರಖ್‌ಪುರ ಜಿಲ್ಲೆಯ 9 ಕ್ಷೇತ್ರಗಳ ಪೈಕಿ 8 ರಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.
ಹೀಗಾಗಿ 2017ರ ಗೆಲುವಿನ ನಾಗಾಲೋಟ ಮುಂದುವರೆಸುವ ಜವಾಬ್ದಾರಿಯನ್ನು ಯೋಗಿ ಆದಿತ್ಯನಾಥ್ ಅವರಿಗೆ ಬಿಜೆಪಿ ವರಿಷ್ಠರು ವಹಿಸಿದ್ದಾರೆ. ಹೀಗಾಗಿ ಅಯೋಧ್ಯೆ ಮತ್ತು ಮಥುರಾದಿಂದ ಯೋಗಿ ಅವರನ್ನು ಕಣಕ್ಕಿಳಿಸುವ ಪ್ಲಾನ್ ಅನ್ನು ಬಿಜೆಪಿ ಕೈಬಿಟ್ಟಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು ಮೊದಲ ಹಂತ ಮತ್ತು ಫೆಬ್ರವರಿ 14ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.