ಲಖನೌ (ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿವೆ. ಆದ್ರೆ, ಜನರು ಜ್ವರದಿಂದ ತತ್ತರಿಸುತ್ತಿದ್ದಾರೆ. ಸ್ಕ್ರಬ್ ಟೈಫಸ್ ಮತ್ತು ಲೆಪ್ಟೊಸ್ಪೈರೋಸಿಸ್‌ನಂಥ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರ ಜೊತೆಗೆ ಜನರಿಲ್ಲಿ ಡೆಂಗ್ಯೂ ಜ್ವರದಿಂದಲೂ ಬಳಲುತ್ತಿದ್ದಾರೆ.
ರಾಜ್ಯ ಆರೋಗ್ಯ ನಿರ್ದೇಶನಾಲಯದ ವರದಿಯ ಪ್ರಕಾರ, 155 ರೋಗಿಗಳಲ್ಲಿ ಹೊಸದಾಗಿ ಡೆಂಗ್ಯೂ ಪತ್ತೆಯಾಗಿದೆ.
ಮಳೆಗಾಲ ಮುಗಿಯುವ ತನಕಡೆಂಗ್ಯೂಅಪಾಯ:
ರಾಜ್ಯದ ಸಾಂಕ್ರಾಮಿಕ ರೋಗಗಳ ನಿರ್ದೇಶಕ ಡಾ.ಜಿ.ಎಸ್.ಬಾಜಪೈ ಅವರ ಪ್ರಕಾರ, ಮಳೆಗಾಲ ಮುಗಿಯುವ ಒಂದು ತಿಂಗಳತನಕ ಡೆಂಗ್ಯೂ ಅಪಾಯವಿದೆ. ಇಂತಹ ಪರಿಸ್ಥಿತಿಯಲ್ಲಿ, ನವೆಂಬರ್ ಮೊದಲ ವಾರದವರೆಗೆ ಜನರು ಹೆಚ್ಚು ಜಾಗರೂಕರಾಗಿರಬೇಕು.
ಇದನ್ನೂ ಓದಿ:ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಮೋದಿ ಸೇರಿ ಗಣ್ಯರ ಕಂಬನಿ
ಹೆಚ್ಚಿನ ಸಾವಿಗೆ ಕಾರಣವಾದ ಡಿ-2 ತಳಿಗಳು:
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ ಅವರ ಪ್ರಕಾರ, ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಹೆಚ್ಚಿನ ಸಾವುಗಳು ಡೆಂಗ್ಯೂ ಜ್ವರದ ಡಿ -2 ತಳಿಗಳಿಂದಾಗಿವೆ. ಈ ತಳಿ ಬಹಳ ಮಾರಕ. ಇದು ಹೆಚ್ಚಾಗಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಇದಲ್ಲದೇ, ಇದು ಪ್ಲೇಟ್ಲೆಟ್ ಎಣಿಕೆಯ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ. ಈ ತಳಿ ಮಥುರಾ ಮತ್ತು ಆಗ್ರಾದಲ್ಲಿಯೂ ಕಂಡುಬಂದಿದೆ ಎಂದರು.
ಯಾವುದೇ ಜ್ವರವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಮಲೇರಿಯಾ, ಡೆಂಗ್ಯೂ ಅಥವಾ ಕೋವಿಡ್ ಆಗಿರಬಹುದು ಎಂದು ಸಲಹೆ ನೀಡಿದ್ದಾರೆ. ಈ ಸಮಯದಲ್ಲಿ ಕೋವಿಡ್ ಮತ್ತು ಡೆಂಗ್ಯೂ ಎರಡರ ಅಪಾಯವಿದೆ ಮತ್ತು ಎರಡೂ ಮಾರಕವಾಗಬಹುದು ಎಂದು ಅವರು ಹೇಳಿದರು.
ಡೆಂಗ್ಯೂಲಕ್ಷಣಗಳೇನು?:
ಟೈಪ್ 1 ಡೆಂಗ್ಯೂನಲ್ಲಿ, ಅಧಿಕ ಜ್ವರದೊಂದಿಗೆ ದೇಹ, ಕೀಲುಗಳು ಮತ್ತು ತಲೆಯಲ್ಲಿ ನೋವು ಇರುತ್ತದೆ. ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಐದರಿಂದ ಏಳು ದಿನಗಳಲ್ಲಿ ಗುಣಪಡಿಸಬಹುದು.
ಟೈಪ್ 2 ಡೆಂಗ್ಯೂ ಹೆಮರಾಜಿಕ್ ಜ್ವರದಲ್ಲಿ, ರೋಗಿಯ ದೇಹದಲ್ಲಿನ ಪ್ಲೇಟ್‌ಲೆಟ್‌ಗಳು ತ್ವರಿತವಾಗಿ ಕಡಿಮೆಯಾಗುತ್ತವೆ. ರಕ್ತಸ್ರಾವ ಆರಂಭವಾಗುತ್ತದೆ ಮತ್ತು ದೇಹದ ವಿವಿಧ ಭಾಗಗಳಲ್ಲಿ ರಕ್ತ ಸಂಗ್ರಹವಾಗಲು ಆರಂಭವಾಗುತ್ತದೆ. ಇದು ಶ್ವಾಸಕೋಶ, ಹೊಟ್ಟೆ, ಮೂತ್ರಪಿಂಡ ಅಥವಾ ಮೆದುಳನ್ನು ಕೂಡ ತಲುಪಬಹುದು. ಅದೇ ಸಮಯದಲ್ಲಿ, ದೇಹದ ಮೇಲೆ ದದ್ದುಗಳು ಕಂಡುಬರುತ್ತವೆ. ಇದರಿಂದ ರಕ್ತ ಸೋರಿಕೆಯಾಗುತ್ತಲೇ ಇರುತ್ತದೆ. ಈ ಜ್ವರ ಮಾರಕವಾಗಬಹುದು.
ಟೈಪ್ 3 ಡೆಂಗ್ಯೂಯಲ್ಲಿ ರೋಗಿಯು ಜ್ವರದ ಜೊತೆಗೆ ರಕ್ತದೊತ್ತಡದಲ್ಲಿ ಹಠಾತ್ ಕುಸಿತವನ್ನು ಅನುಭವಿಸುತ್ತಾನೆ. ಆಂತರಿಕ ರಕ್ತಸ್ರಾವದ ಅಪಾಯ ಹೆಚ್ಚು ಮತ್ತು ರೋಗಿಯು ಆಘಾತಕ್ಕೆ ಒಳಗಾಗುತ್ತಾನೆ. ಬಹು ಅಂಗಾಂಗ ವೈಫಲ್ಯ ಸಂಭವಿಸುತ್ತದೆ. ಇದರಿಂದಾಗಿ ರೋಗಿಯು ಸಾಯಬಹುದು. ಈ ಜ್ವರದಲ್ಲಿ, ರೋಗಿಯು ಸಹ ಸಾಕಷ್ಟು ದೌರ್ಬಲ್ಯದಿಂದ ಬಳಲುತ್ತಾನೆ.
ಅಧಿಕ ಜ್ವರ, ತಲೆನೋವು, ಸ್ನಾಯು, ಕೀಲು ನೋವು, ಕಣ್ಣುಗಳ ಹಿಂದೆ ನೋವು, ದೌರ್ಬಲ್ಯ, ಹಸಿವು ಮತ್ತು ವಾಕರಿಕೆ, ಮುಖ, ಕುತ್ತಿಗೆ, ಎದೆಯ ಮೇಲೆ ಕೆಂಪು-ಗುಲಾಬಿ ಬಣ್ಣದ ದದ್ದುಗಳು ಡೆಂಗ್ಯೂ ಲಕ್ಷಣಗಳಾಗಿವೆ.
ಇದನ್ನೂ ಓದಿ:ಲೇಹ್‌ನಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲೆ
ಮತ್ತೊಂದೆಡೆ, ಟೈಪ್ 2 ಡೆಂಗ್ಯೂನಲ್ಲಿ ಮೂಗು, ಬಾಯಿ, ಒಸಡುಗಳು ಮತ್ತು ಮಲದಿಂದ ರಕ್ತಸ್ರಾವವಾಗುತ್ತದೆ. ಅಲ್ಲದೆ, ಟೈಪ್ 3 ಡೆಂಗ್ಯೂನಲ್ಲಿ ಕಡಿಮೆ ರಕ್ತದೊತ್ತಡ, ರೋಗಿಯು ಮೂರ್ಛೆ ಹೋಗಬಹುದು ಮತ್ತು ದೇಹದಲ್ಲಿನ ಪ್ಲೇಟ್‌ಲೆಟ್‌ಗಳು ನಿರಂತರವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತವೆ.
ಮುನ್ನೆಚ್ಚರಿಕಾ ಕ್ರಮಗಳೇನು?:
ಜನರು ಮನೆ ಮತ್ತು ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಮತ್ತು ಕೂಲರ್, ಬಾತ್ರೂಮ್ ಮತ್ತು ಅಡುಗೆಮನೆಯಲ್ಲಿ ನೀರು ತುಂಬಿಕೊಳ್ಳದಂತೆ ಗಮನ ನೀಡಬೇಕು. ಸಂಗ್ರಹಿಸಿದ ನೀರಿನಲ್ಲಿರುವ ಸೊಳ್ಳೆ ಲಾರ್ವಾಗಳನ್ನು ಎಣ್ಣೆಯನ್ನು ಸಿಂಪಡಿಸುವುದರಿಂದ ಕೊಲ್ಲಬಹುದು.
ಎಸಿ ಟ್ರೇಯಿಂದ ತೊಟ್ಟಿಕ್ಕುವ ನೀರನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಎಸಿಯ ನೀರಿನ ತೊಟ್ಟಿಯನ್ನು ಪ್ರತಿದಿನ ಸ್ವಚ್ಛಗೊಳಿಸಿ ಮತ್ತು ಮನೆಯಲ್ಲಿ ಇಟ್ಟಿರುವ ಪಾತ್ರೆಯಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ.
ಜನರು ಛಾವಣಿಯ ಮೇಲೆ ಮುರಿದ ಡಬ್ಬಿಗಳು, ಟೈರುಗಳು, ಪಾತ್ರೆಗಳು, ಬಾಟಲಿಗಳು ಇತ್ಯಾದಿಗಳನ್ನು ಇಟ್ಟುಕೊಳ್ಳಬಾರದು. ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ನೀಡಲು ಬಳಸುವ ಪಾತ್ರೆಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು.
ಜನರು ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಹ ಬಟ್ಟೆಗಳನ್ನು ಧರಿಸಬೇಕು. ಮಕ್ಕಳನ್ನು ಪ್ಯಾಂಟ್ ಮತ್ತು ಪೂರ್ಣ ತೋಳಿನ ಶರ್ಟ್ ಧರಿಸುವಂತೆ ಮಾಡಬೇಕು. ಸಾಧ್ಯವಾದರೆ, ಜನರು ಸೊಳ್ಳೆ ಪರದೆ ಅಡಿಯಲ್ಲಿ ಮಲಗಬೇಕು.
ಆಹಾರ ಸೇವನೆ ಕ್ರಮ ಹೀಗಿರಲಿ..
ಜ್ವರದ ಸಮಯದಲ್ಲಿ ಆಹಾರದ ಬಗ್ಗೆಯೂ ಕಾಳಜಿ ವಹಿಸಬೇಕು. ಹಸಿರು ತರಕಾರಿಗಳು ಮತ್ತು ಹಣ್ಣುಗಳೊಂದಿಗೆ ಪೌಷ್ಟಿಕ ಆಹಾರವನ್ನು ಸೇವಿಸುವುದು ಮತ್ತು ಸಾಕಷ್ಟು ದ್ರವ ಆಹಾರ ಸೇವನೆ ಒಳ್ಳೆಯದು. ಜನರು ನೀರು, ಸೂಪ್, ಹಾಲು, ಮಜ್ಜಿಗೆ, ತೆಂಗಿನ ನೀರು, ORS ದ್ರಾವಣ, ಜ್ಯೂಸ್, ಶಿಕಂಜಿ ಇತ್ಯಾದಿಗಳನ್ನು ತೆಗೆದುಕೊಳ್ಳಬೇಕು. ಆದರೆ ಹಳೆಯ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸಬಾರದು.
ಇದನ್ನೂ ಓದಿ:ಯುಪಿ ವಿಧಾನಸಭೆ ಚುನಾವಣೆ: ಪ್ರಿಯಾಂಕಾ ಗಾಂಧಿ ಸಿಎಂ ಅಭ್ಯರ್ಥಿ?