ನವದೆಹಲಿ:ಉತ್ತರ ಭಾರತದಲ್ಲಿ ಅಕಾಲಿಕ ಮಳೆಯು ರೈತರಿಗೆ ಸಂಕಷ್ಟ ತಂದೊಡ್ಡಿದೆ. ಆಲಿಕಲ್ಲುಸಹಿತ ಮಳೆ ಹಾಗೂ ವಿಪರೀತ ಗಾಳಿಯಿಂದಾಗಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿ ಮೂರು ರಾಜ್ಯಗಳಲ್ಲಿ 5.23 ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚು ಗೋಧಿ ಬೆಳೆ ನಾಶವಾಗಿದೆ. ಇದರಿಂದ ರೈತರು ಗೋಧಿ ಇಳುವರಿ ನಷ್ಟ ಅನುಭವಿಸಿದ್ದು, ಕೊಯ್ಲಿಗೂ ಸಮಸ್ಯೆ ಎದುರಿಸುವಂತಾಗಿದೆ.
ಈ ವರ್ಷ ಸುಮಾರು 34 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬಿತ್ತನೆಯಾಗಿದೆ. ಪ್ರಸಕ್ತ 2022-23ನೇ ಬೆಳೆ ವರ್ಷ (ಜುಲೈ- ಜೂನ್)ದಲ್ಲಿ ಅಂದಾಜು 112.2 ಮಿಲಿಯನ್ ಟನ್ ಗೋಧಿ ಉತ್ಪಾದನೆಯ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಆದರೆ, ಕೊಯ್ಲು ಗೋಧಿ ಮಳೆ ಮತ್ತು ಗಾಳಿಯಿಂದ ಮಣ್ಣು ಪಾಲಾಗಿದೆ. ಇದುವರೆಗೆ ಪ್ರಮುಖ ಮೂರು ರಾಜ್ಯಗಳಲ್ಲಿ ಸುಮಾರು 5.23 ಲಕ್ಷ ಹೆಕ್ಟೇರ್ ಗೋಧಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಳೆ ಹಾನಿಯ ಮೌಲ್ಯಮಾಪನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಗಳೊಂದಿಗೆ ಕೇಂದ್ರದ ಸಮಾಲೋಚನೆ: ಸರ್ಕಾರ ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ ಮಾತನಾಡಿ, "ಕಳೆದ ಎರಡು ಮೂರು ದಿನಗಳಲ್ಲಿ ಅಕಾಲಿಕ ಮಳೆಯಿಂದಾಗಿ ಗೋಧಿ ಮತ್ತು ಇತರ ರಾಬಿ ಬೆಳೆಗಳಿಗೆ ಹಾನಿ ಉಂಟಾಗಿದೆ. ಬೆಳೆ ನಷ್ಟದ ಪ್ರಮಾಣದ ತಿಳಿಯುವ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರ ಸೋಮವಾರದಿಂದ ಸಮಲೋಚನೆ ನಡೆಸುತ್ತಿದೆ" ಎಂದು ಹೇಳಿದರು.
ಗೋಧಿ ಚಳಿಗಾಲದ ಪ್ರಮುಖ ಬೆಳೆಯಾಗಿದ್ದು, ಕೊಯ್ಲಿಗೆ ಬಹುತೇಕ ಸಿದ್ಧವಾಗಿದ್ದ ಸಮಯದಲ್ಲಿ ಅಕಾಲಿಕ ಮಳೆ ಸುರಿದಿದೆ. ಕಳೆದ ಎರಡು ವಾರಗಳಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಗೋಧಿ ಬೆಳೆಯುವ ಪ್ರದೇಶದಲ್ಲಿ ಗುಡುಗು, ಆಲಿಕಲ್ಲು ಮತ್ತು ಬಿರುಗಾಳಿಯೊಂದಿಗೆ ಅಕಾಲಿಕ ಮಳೆ ಆಗುತ್ತಿದೆ. ಇದು ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಪ್ರಾರಂಭವಾಗಿದೆ.