ನವದೆಹಲಿ: ಅನಗತ್ಯ ಮೊಕದ್ದಮೆ ದಾಖಲಿಸುವ ಬೇಜವಾಬ್ದಾರಿ ದೂರುದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ದೂರುದಾರರೊಬ್ಬರಿಗೆ 25 ಲಕ್ಷ ರೂ. ದಂಡ ವಿಧಿಸಿದೆ. ಸುಳ್ಳು ಮಾಹಿತಿ ನೀಡುವ, ಸತ್ಯ ಮರೆಮಾಚುವ ಮತ್ತು ಹಿತಾಸಕ್ತಿ ಸಾಧನೆಗಾಗಿ ಅರ್ಜಿ ಸಲ್ಲಿಸುವ ದೂರುದಾರರನ್ನು ಶಿಕ್ಷಿಸದೇ ಬಿಡಬಾರದು ಎಂದು ಕೋರ್ಟ್ ಈ ಸಂದರ್ಭದಲ್ಲಿ ಹೇಳಿದೆ.
ದೆಹಲಿಯಲ್ಲಿನ ವಾಣಿಜ್ಯ ವ್ಯವಹಾರವೊಂದರ ವಿಷಯದಲ್ಲಿ ಉದ್ಭವಿಸಿದ ಸಿವಿಲ್ ವಿವಾದದಲ್ಲಿ ಅಗತ್ಯ ಸಂಗತಿಗಳನ್ನು ಬಹಿರಂಗಪಡಿಸದೇ ಸುಳ್ಳು ಮತ್ತು ಕ್ಷುಲ್ಲಕ ದೂರಿನ ಆಧಾರದ ಮೇಲೆ ಕಕ್ಷಿದಾರರು ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸುಪ್ರೀಂಕೋರ್ಟ್ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ರಾಜೇಶ್ ಬಿಂದಾಲ್ ಅವರನ್ನೊಳಗೊಂಡ ನ್ಯಾಯಪೀಠ, "ಈ ಪ್ರಕರಣದಲ್ಲಿ, ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಮತ್ತು ಅಂಥ ದೂರುಗಳನ್ನು ಸ್ವೀಕರಿಸಲು ಕ್ಷುಲ್ಲಕ ಕಾರಣಗಳನ್ನು ನೀಡುವ ಮೂಲಕ ಪ್ರಾದೇಶಿಕ ನ್ಯಾಯವ್ಯಾಪ್ತಿ ಇಲ್ಲದ ನ್ಯಾಯಾಲಯದ ಮುಂದೆ ಕ್ರಿಮಿನಲ್ ವಿಚಾರಣೆಯ ಅರ್ಜಿ ದಾಖಲಿಸಿರುವುದು ಕಂಡು ಬಂದಿದೆ. ಪ್ರತಿವಾದಿಯ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನ್ಯಾಯವ್ಯಾಪ್ತಿಯ ಅನುಚಿತ ಬಳಕೆಗಿಂತ ಇನ್ನೂ ಹೆಚ್ಚಿನ ದುರ್ವರ್ತನೆ ಕಂಡು ಬರುತ್ತದೆ" ಎಂದು ಹೇಳಿತು.
ಬೇಜವಾಬ್ದಾರಿ ದೂರು ಸಲ್ಲಿಸುವ ಕಕ್ಷಿದಾರರಿಗೆ ಮೊಕದ್ದಮೆಯ ವೆಚ್ಚಕ್ಕಾಗಿ ದಂಡ ವಿಧಿಸಬೇಕು ಮತ್ತು ಅವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. "ಮರೆಮಾಚುವಿಕೆ, ಸುಳ್ಳು ಮತ್ತು ಹಿತಾಸಕ್ತಿಯ ಉದ್ದೇಶದಿಂದ ಸಲ್ಲಿಸಲಾದ ದಾವೆ ಪರಿಶೀಲಿಸಲು ಇದು ಸೂಕ್ತ ಸಮಯ" ಎಂದು ನ್ಯಾಯಪೀಠ ಹೇಳಿದೆ.
ಹಣಕಾಸು ವಹಿವಾಟುಗಳು ಮತ್ತು ಒಪ್ಪಂದಗಳನ್ನು ಒಳಗೊಂಡಿರುವ ವಿವಾದವು ಸಿವಿಲ್ ಮತ್ತು ವಾಣಿಜ್ಯ ಕಾನೂನಿನ ವ್ಯಾಪ್ತಿಯಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ. "ಆದರೂ, ಪ್ರತಿವಾದಿಯು ನಿಜವಾದ ನ್ಯಾಯ ಹುಡುಕುವ ಬದಲು ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಕ್ರಿಮಿನಲ್ ಆರೋಪಗಳನ್ನು ಮುಂದುವರಿಸಲು ಬಯಸಿದ್ದಾರೆ" ಎಂದು ನ್ಯಾಯಪೀಠ ಜನವರಿ 11 ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.
ನ್ಯಾಯಾಂಗ ಪರಿಹಾರಗಳ ದುರುಪಯೋಗಕ್ಕೆ ಕಾರಣವಾಗುವ ಇಂತಹ ಕೃತ್ಯಗಳಿಂದ ಇತರರನ್ನು ತಡೆಯುವ ಉದ್ದೇಶದಿಂದ ದೂರುದಾರ ಕರಣ್ ಗಂಭೀರ್ ಅವರಿಗೆ ವೆಚ್ಚ ವಿಧಿಸಲು ನಿರ್ಧರಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
"ವಿವಾದವು ವಾಣಿಜ್ಯ ವಿವಾದವಾಗಿರುವ ಹೊರತಾಗಿಯೂ ಕ್ರಿಮಿನಲ್ ದೂರು ದಾಖಲಿಸಲಾಗಿದೆ ಮತ್ತು ಮೇಲ್ಮನವಿದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಧಿಕಾರ ಮತ್ತು ಕಾನೂನು ಯಂತ್ರದ ದುರುಪಯೋಗದ ಇಂತಹ ಕೆಟ್ಟ ಉದ್ದೇಶದ ಕೃತ್ಯಗಳು ನ್ಯಾಯಾಂಗ ಕಾರ್ಯನಿರ್ವಹಣೆಯ ಮೇಲಿನ ಸಾರ್ವಜನಿಕ ನಂಬಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ" ಎಂದು ನ್ಯಾಯಪೀಠ ಹೇಳಿದೆ.