ಛತ್ತೀಸ್‌ಗಢ: ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ- 1956 ರ ನಿಬಂಧನೆಗಳ ಅಡಿಯಲ್ಲಿ ಅವಿವಾಹಿತ ಮಗಳು ಪೋಷಕರಿಂದ ತನ್ನ ಮದುವೆಯ ವೆಚ್ಚವನ್ನು ಪಡೆಯಬಹುದು ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ. ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ ಮದುವೆಗೂ ಮುನ್ನ ಮತ್ತು ಮದುವೆಯ ನಂತರ ಹಲವು ರೀತಿಯ ವೆಚ್ಚಗಳನ್ನು ಮಾಡಬೇಕಾಗುತ್ತದೆ. ಆ ಹಣವನ್ನು ಪೋಷಕರಿಂದ ಆಕೆ ಪಡೆಯಬಹುದು ಎಂದು ಕೋರ್ಟ್ ಹೇಳಿದೆ.
ಛತ್ತೀಸ್‌ಗಢದ ದುರ್ಗ ಜಿಲ್ಲೆಯ ರಾಜೇಶ್ವರಿ (35) ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಿಲಾಸ್‌ಪುರ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಹೊರಡಿಸಿತು. ನ್ಯಾಯಮೂರ್ತಿಗಳಾದ ಗೌತಮ್ ಭದೂರಿ ಮತ್ತು ನ್ಯಾ.ಸಂಜಯ್ ಎಸ್. ಅಗರವಾಲ್ ಅವರಿದ್ದ ಪೀಠವು ಈ ಸಂಬಂಧ ವಿಚಾರಣೆ ನಡೆಸಿ ಮಾರ್ಚ್ 21 ರಂದು ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆಯ ಅಡಿಯಲ್ಲಿ ಅವಿವಾಹಿತ ಮಗಳು ತನ್ನ ಮದುವೆಯ ಮೊತ್ತವನ್ನು ತನ್ನ ಪೋಷಕರಿಂದ ಪಡೆಯಬಹುದು ಎಂದು ತೀರ್ಪು ನೀಡಿದೆ. ಈ ಮೂಲಕ 2016 ರ ಏಪ್ರಿಲ್ 22 ರಂದು ದುರ್ಗ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಹೊರಡಿಸಿದ ಆದೇಶವನ್ನು ರದ್ದುಗೊಳಿಸಿತು.