ನವದೆಹಲಿ:ಮಣಿಪುರದಲ್ಲಿ ಕಾರ್ಯಾಚರಿಸುತ್ತಿರುವ ಅತ್ಯಂತ ಹಳೆಯ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್) ಬುಧವಾರ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಹಿಂಸಾಚಾರವನ್ನು ತ್ಯಜಿಸಲು ಒಪ್ಪಿಗೆ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಈಶಾನ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಮೋದಿ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದ್ದು, ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ ಬುಧವಾರ ನವದೆಹಲಿಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಐತಿಹಾಸಿಕ ಮೈಲಿಗಲ್ಲು ಎಂದು ಶಾ ಬಣ್ಣಿಸಿದ್ದಾರೆ.
"ಮಣಿಪುರದ ಅತ್ಯಂತ ಹಳೆಯ ಕಣಿವೆ ಮೂಲದ ಸಶಸ್ತ್ರ ಗುಂಪಾದ ಯುಎನ್‌ಎಲ್‌ಎಫ್ ಹಿಂಸಾಚಾರವನ್ನು ತ್ಯಜಿಸಲು ಮತ್ತು ಮುಖ್ಯವಾಹಿನಿಗೆ ಸೇರಲು ಒಪ್ಪಿಕೊಂಡಿದೆ. ನಾನು ಅವರನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಸ್ವಾಗತಿಸುತ್ತೇನೆ ಮತ್ತು ಶಾಂತಿ, ಪ್ರಗತಿಯ ಹಾದಿಯಲ್ಲಿ ಸಾಗುವ ಅವರ ಪ್ರಯಾಣಕ್ಕೆ ಶುಭ ಹಾರೈಸುತ್ತೇನೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.