ನವದೆಹಲಿ/ನೋಯ್ಡಾ:ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ದೊಡ್ಡ ಅಪಘಾತ ಸಂಭವಿಸಿದೆ. ಅಪರಿಚಿತ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ದೆಹಲಿಯಿಂದ ಜಾರ್ಖಂಡ್‌ಗೆ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ಎಂಟು ಜನರು ತೆರಳುತ್ತಿದ್ದರು. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜೇವರ್‌ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳ ಪರಿಶೀಲಿಸಿದ ನಂತರ, ಪೊಲೀಸರು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಯಮುನಾ ಎಕ್ಸ್‌ಪ್ರೆಸ್‌ವೇಯ ಝೀರೋ ಪಾಯಿಂಟ್‌ನಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ರಬುಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ 1 ಗಂಟೆ ಸುಮಾರಿಗೆ ಅಪರಿಚಿತ ವಾಹನವು ಎಕೋ ವ್ಯಾನ್‌ಗೆ (ಕಾರ್) ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ದೆಹಲಿಯಲ್ಲಿ ನೆಲೆಸಿದೆ ಎಂದು ಹೇಳಲಾಗುತ್ತಿದೆ. ಸಾವನ್ನಪ್ಪಿರುವವರು ಜಾರ್ಖಂಡ್ ನಿವಾಸಿಗಳು ಎಂದು ಗುರುತಿಸಲಾಗಿದೆ. ದಕ್ಷಿಣ ದೆಹಲಿಯ ಕಾಳಿಂದಿ ಕುಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮದನ್‌ಪುರ ಖಾದರ್‌ನ ಜೆಜೆ ಕಾಲೋನಿ ನಿವಾಸಿ ಉಪೇಂದ್ರ (38), ಅವರ ಸಹೋದರ ಬಿಜೇಂದ್ರ (36), ಬಿಜೇಂದ್ರ ಅವರ ಪತ್ನಿ ಕಾಂತಿ ದೇವಿ (30), ಬಿಜೇಂದ್ರ ಅವರ ಪುತ್ರಿ ಕುವಿ ಸೇರಿದ್ದಾರೆ. ಜ್ಯೋತಿ (12) ಮತ್ತು ಸುರೇಶ್ (45) ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಉಪೇಂದ್ರ ಅವರ ಪುತ್ರ ಸೂರಜ್ (16), ಬಿಜೇಂದ್ರ ಅವರ ಪುತ್ರ ಆಯುಷ್ (8) ಮತ್ತು ಆರ್ಯನ್ (10) ಗಂಭೀರವಾಗಿ ಗಾಯಗೊಂಡಿದ್ದಾರೆ. ಜೇವರ್‌ನ ಕೈಲಾಶ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಜೊತೆಗೆ ಅಪರಿಚಿತ ವಾಹನದ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ:ನವದೆಹಲಿ ಬಳಿಕ ಮುಂಬೈನಲ್ಲಿ ಹೆಚ್ಚುತ್ತಿದೆ ವಾಯುಮಾಲಿನ್ಯ; ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬಿಎಂಸಿ