ಪುಣೆ: ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಬೀದಿ ಶ್ವಾನಕ್ಕೆ ಜನ್ಮದಿನವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಬ್ಯಾನರ್ ಕಟ್ಟಿ, ಅದರಲ್ಲಿ ತಮ್ಮ ನೆಚ್ಚಿನ ಶ್ವಾನ ಫೋಟೋ ಹಾಕಿ, ಬಳಿಕ ಶುಭಾಶಯ ತಿಳಿಸುವವರ ಫೋಟೋಗಳನ್ನು ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಖಂಡು ಎಂಬ ಬೀದಿ ನಾಯಿಗೆ ಜನ್ಮದಿನವನ್ನು ಆಚರಿಸಿದ್ದಾರೆ. ವಿವಿ ವಿದ್ಯಾರ್ಥಿಗಳು ಬೀದಿ ಶ್ವಾನವೊಂದನ್ನು ಸಾಕುತ್ತಿದ್ದಾರೆ. ಇದಕ್ಕೆ ಖಂಡು ಎಂದು ಹೆಸರಿಟ್ಟಿದ್ದು, ಇದು ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನೆಚ್ಚಿನ ಶ್ವಾನವಾಗಿದೆ.
ಖಂಡು ಜನ್ಮದಿನವನ್ನು ಮೇ 26 ರಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಖತ್ ಆಗಿಯೇ ಆಚರಿಸಿದ್ದಾರೆ. ಬ್ಯಾನರ್ ಹಾಕಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವ ಮೂಲಕ ಖಂಡು ಭಾಯ್ ಜನ್ಮದಿನವನ್ನು ಆಚರಿಸಿದ್ದಾರೆ. ಖಂಡು ಭಾಯ್ ಹುಟ್ಟುಹಬ್ಬದ ಕುರಿತು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.