ರಾಯಪುರ( ಛತ್ತೀಸ್‌ಗಢ): ಬಹುತೇಕರು ತಮ್ಮ ಮದುವೆ ಸಮಾರಂಭವನ್ನು ಬಹಳ ಅದ್ಧೂರಿಯಾಗಿ ಪ್ರೀ ವೆಡ್ಡಿಂಗ್ ಫೋಟೋಶೂಟ್ , ಪಾರ್ಟಿ, ಹಾಡು, ಕುಣಿತ, ಪಟಾಕಿ ಸಿಡಿಸಿ, ಮೆರವಣಿಗೆ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ಆದರೆ, ಇದಕ್ಕೆಲ್ಲ ಭಿನ್ನ ಎಂಬಂತೆ ಇಲ್ಲೊಂದು ಜೋಡಿ ತಮ್ಮ ವಿವಾಹ ಸಮಾರಂಭದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಹೌದು, ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯ ಕಂಡೇಲ್ ಗ್ರಾಮದಲ್ಲಿ ಈ ವಿಶಿಷ್ಟ ವಿವಾಹ ಕಾರ್ಯಕ್ರಮ ನೆರವೇರಿದೆ. ಮದುವೆ ಸಮಾರಂಭದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ರಕ್ತದಾನದ ಜೊತೆಗೆ, ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಕೆಲ ಆಹ್ವಾನಿತರು ತಮ್ಮ ಕಣ್ಣುಗಳು ಸೇರಿದಂತೆ ಇತರ ಅಂಗಗಳನ್ನು ದಾನ ಮಾಡಲು ಸಹ ಮುಂದೆ ಬಂದರು. ಹಾಗೆಯೇ, ಅತಿಥಿಗಳು, ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ರಕ್ತದಾನ ಮಾಡಿದ ದೃಶ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಕಂಡೇಲ್ ಗ್ರಾಮದ ವಿಶೇಷತೆ: ಮಹಾತ್ಮ ಗಾಂಧಿ ಅವರು ಸತ್ಯಾಗ್ರಹ ಚಳವಳಿಯನ್ನು ಆರಂಭಿಸಿದಾಗ ಕಂಡೇಲ್ ಗ್ರಾಮವು ಜನಪ್ರಿಯವಾಯಿತು. ಈ ಗ್ರಾಮಕ್ಕೆ ಐತಿಹಾಸಿಕ ಮಹತ್ವವಿದೆ. ಧಮ್ತಾರಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಜನರು 1920 ರಲ್ಲಿ ಪ್ರಾರಂಭವಾದ ಬಾಪು ಅವರ ಚಳವಳಿಯಲ್ಲಿ ಭಾಗವಹಿಸಿದ್ದರು. ಗಾಂಧೀಜಿಯವರು ಕಾಲುವೆ ಸತ್ಯಾಗ್ರಹವನ್ನು ಪ್ರಾರಂಭಿಸಲು ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಕಂಡೇಲ್ ಗ್ರಾಮವು ಪ್ರಾಮುಖ್ಯತೆ ಗಳಿಸಿತ್ತು.
ಇದನ್ನೂ ಓದಿ :ಹಣವಿಲ್ಲದಿದ್ದರೇನು ವಿಡಿಯೋ ಕಾನ್ಪರೆನ್ಸ್ ಇದೆಯೆಲ್ಲ; ಆನ್ಲೈನ್ನಲ್ಲೇ ನಿಕಾಹ್ ಓದಿ ಭಾರತದ ಹೊಸ್ತಿಲು ತುಳಿದ ವಧು!