ಪೂರ್ಣಿಯಾ(ಬಿಹಾರ):ಕುಟುಂಬ ಸದಸ್ಯರು ಪರಸ್ಪರ ಬೇರೆ ಬೇರೆಯಾಗುವ ಸಂದರ್ಭದಲ್ಲಿ ಮನೆ, ಭೂಮಿ, ಚಿನ್ನಾಭರಣ ಹಾಗೂ ಹಣವನ್ನು ಪಾಲು ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ವಿಚಿತ್ರ ಪ್ರಕರಣದಲ್ಲಿ ಇಬ್ಬರು ಹೆಂಡತಿಯರು ಕಟ್ಟಿಕೊಂಡ ಗಂಡನನ್ನು ಪರಸ್ಪರ ಶೇರ್ ಮಾಡಿಕೊಂಡಿದ್ದಾರೆ. ಬಿಹಾರದ ಪೂರ್ಣಿಯಾ ಎಂಬಲ್ಲಿ ಈ ಘಟನೆ ನಡೆದಿದೆ.
ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬುದು ಗಾದೆ ಮಾತು. ಆದರೆ, ಇಲ್ಲಿ ಬಡವಾಗಿರುವುದು ಕೂಸು ಅಲ್ಲ, ಗಂಡ ಎನ್ನಬಹುದೇನೋ. ಭವಾನಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೋರಿಯಾರಿ ಗ್ರಾಮದ ನಿವಾಸಿ ಕೆಲವು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದು, ಆರು ಮಕ್ಕಳ ತಂದೆಯಾಗಿದ್ದಾನೆ. ಇದರ ಮಧ್ಯೆ ಬೇರೊಬ್ಬ ಮಹಿಳೆಯನ್ನೂ ಆತ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾನೆ. ಎರಡನೇ ಹೆಂಡ್ತಿಗೂ ಹೆಣ್ಣು ಮಗುವಿದೆ. ಗಂಡ ಈಗಾಗಲೇ ಮದುವೆಯಾಗಿರುವ ವಿಷಯ ಎರಡನೇ ಹೆಂಡತಿಗೆ ಗೊತ್ತಾಗಿದೆ. ಇದಕ್ಕೆ ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರ ಬೆನ್ನಲ್ಲೇ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು.