ನವದೆಹಲಿ: ಗೋವಾದಲ್ಲಿ ತಮ್ಮ ಮಗಳು ಜೋಯಿಸ್ ಇರಾನಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂಬ ಆರೋಪ ಸಂಬಂಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಲಿಖಿತವಾಗಿಯೇ ಬೇಷರತ್ ಕ್ಷಮೆಯಾಚಿಸಬೇಕೆಂದು ಈ ನೋಟಿಸ್ ಮೂಲಕ ಆಗ್ರಹಿಸಿದ್ದಾರೆ.
ಗೋವಾದಲ್ಲಿ ಇರಾನಿ ಅವರ ಪುತ್ರಿ ನಡೆಸುತ್ತಿರುವ ‘ಸಿಲ್ಲಿ ಸೋಲ್ಸ್ ಕೆಫೆ ಆ್ಯಂಡ್ ಬಾರ್’ಗೆ ಅಕ್ರಮವಾಗಿ ಅಬಕಾರಿ ಪರವಾನಗಿ ಪಡೆದು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಶನಿವಾರ ಆರೋಪಿಸಿದ್ದರು. ಈ ಸಂಬಂಧ ಶನಿವಾರವೇ ಮಾಧ್ಯಮಗೋಷ್ಟಿ ನಡೆಸಿದ್ದ ಸಚಿವೆ ಸ್ಮೃತಿ ಇರಾನಿ, ತಮ್ಮ ಮಗಳು 18 ವರ್ಷದವಳಾಗಿದ್ದು, ಕಾಲೇಜಿನಲ್ಲಿ ಓದುತ್ತಿದ್ದಾಳೆ. ಯಾವುದೇ ಬಾರ್ ಹೊಂದಿಲ್ಲ. ಕಾಂಗ್ರೆಸ್ ಮಾಡಿರುವ ಆರೋಪಗಳು ದುರುದ್ದೇಶಪೂರಿತದಿಂದ ಕೂಡಿವೆ ಎಂದು ಸ್ಪಷ್ಟಪಡಿಸಿದ್ದರು.