ನವದೆಹಲಿ:ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲ ಮುಂದುವರಿದಿದೆ. ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಗಂಭೀರ ಚರ್ಚೆ ನಡೆಯಬೇಕು ಎಂದು ಕೋರಿದ್ದ ವಿಪಕ್ಷ ಸದಸ್ಯರು 3ನೇ ದಿನವೂ ಸುಗಮ ಕಲಾಪಕ್ಕೆ ಅನುವು ಮಾಡಿಕೊಡದೆ ಗದ್ದಲ ಉಂಟು ಮಾಡಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ಗದ್ದಲವೆಬ್ಬಿಸಿದಾಗ ಗರಂ ಆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪ್ರತಿಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಾನೂನಿನ ಮುಂದೆ ಎಲ್ಲರೂ ಸಮಾನರು ಗಾಂಧಿ ಕುಟುಂಬಕ್ಕೆ ವಿಶೇಷ ಆದ್ಯತೆಯಿಲ್ಲ ಎಂದರು. ಆಗ ಸದನ ಮತ್ತಷ್ಟು ಗದ್ದಲದ ಗೂಡಾಯಿತು. ಇದರಿಂದ ಸದನವನ್ನು ಮುಂದೂಡಲಾಯಿತು.
ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಕರೆದಿರುವ ಕ್ರಮವನ್ನು ವಿರೋಧಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಗದ್ದಲದ ಮಧ್ಯೆ ಎದ್ದು ನಿಂತು ಪ್ರತಿಪಕ್ಷಗಳ ನಡೆಯನ್ನು ಟೀಕಿಸಿದ ಜೋಶಿ, ಬೆಲೆ ಏರಿಕೆ ಕುರಿತು ಚರ್ಚೆ ನಡೆಸುವುದಾಗಿ ಕೋರಿದಾಗ, ಸರ್ಕಾರ ಸಮ್ಮತಿಸಿದೆ. ಆದರೆ, ಪ್ರತಿಪಕ್ಷಗಳು ಚರ್ಚೆಯ ಬದಲಾಗಿ ಬರೀ ಗದ್ದಲ ಉಂಟು ಮಾಡುತ್ತಿವೆ. ಇದರಿಂದ ಕಲಾಪದ ಸಮಯ ಹಾಳಾಗುತ್ತಿದೆ. ವಿತ್ತ ಸಚಿವರು ಅನಾರೋಗ್ಯಕ್ಕೀಡಾಗಿದ್ದು, ಅವರು ಸದನಕ್ಕೆ ಬಂದ ಬಳಿಕ ಚರ್ಚೆಗೆ ಸಿದ್ಧವಿದ್ದೇವೆ ಎಂದು ಹೇಳಿದರು.
ಇಷ್ಟಾದರೂ ಪ್ರತಿಪಕ್ಷಗಳ ಗದ್ದಲ ನಿಲ್ಲದ ಕಾರಣ ಒಂದು ಹಂತದಲ್ಲಿ ಕೋಪಗೊಂಡ ಸಚಿವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ವಿಶೇಷ ಸ್ಥಾನಮಾನವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರೇ ಎಂದಾಗ ಪ್ರತಿಪಕ್ಷಗಳೊಂದಿಗೆ ಮಾತಿನ ಚಕಮಕಿ ಜೋರಾಯಿತು. ಇದೀಗ ಲೋಕಸಭೆ ಮತ್ತೆ ಸೇರಿದ್ದು, ಕಲಾಪ ನಡೆಯುತ್ತಿದೆ.
ಇದನ್ನೂ ಓದಿ:ಸೋನಿಯಾ ಗಾಂಧಿ ವಿಚಾರಣೆ: ಇಡಿ, ಕಾಂಗ್ರೆಸ್ ಕಚೇರಿಗೆ ಖಾಕಿ ಸರ್ಪಗಾವಲು