ಕರ್ನಾಟಕ

karnataka

ETV Bharat / bharat

ನೀತಿ ಸಂಹಿತೆ ಉಲ್ಲಂಘನೆ: ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ದೋಷಿ, 200 ರೂಪಾಯಿ ದಂಡ

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ದೋಷಿ ಎಂದು ಜಾರ್ಖಂಡ್​ನ ಹಜಾರಿಬಾಗ್ ನ್ಯಾಯಾಲಯ ಆದೇಶಿಸಿದೆ.

union-minister-of-state-annapurna-devi-convicted-by-hazaribagh-court
ನೀತಿ ಸಂಹಿತೆ ಉಲ್ಲಂಘನೆ: ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ದೋಷಿ, 200 ರೂಪಾಯಿ ದಂಡ

By

Published : Apr 28, 2023, 7:39 PM IST

ರಾಂಚಿ/ಹಜಾರಿಬಾಗ್ (ಜಾರ್ಖಂಡ್​​): ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರನ್ನು ಜಾರ್ಖಂಡ್​ನ ಹಜಾರಿಬಾಗ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ಇದೇ ವೇಳೆ, ನ್ಯಾಯಾಲಯವು ಅನ್ನಪೂರ್ಣ ದೇವಿ ಅವರಿಗೆ 200 ರೂಪಾಯಿ ದಂಡ ಕೂಡಾ ವಿಧಿಸಿದೆ.

2019ರ ಮೇ 13ರಂದು ಮತದಾನ ಮಾಡಲು ಅನ್ನಪೂರ್ಣ ದೇವಿ ಪಕ್ಷದ ಚುನಾವಣಾ ಚಿಹ್ನೆಯನ್ನು ಧರಿಸಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದರು ಎಂದು ಜಾರ್ಖಂಡ್ ವಿಕಾಸ್ ಮೋರ್ಚಾ (ಜೆವಿಎಂ) ನಾಯಕ ಮಹೇಶ್ ರಾಮ್ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 130 (ಇ) ಅಡಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿತ್ತು. ಬಳಿಕ ಚಾರ್ಜ್ ಶೀಟ್​ ಸಲ್ಲಿಸಲಾಗಿತ್ತು. ಈ ವೇಳೆ 11 ಮಂದಿಯ ಸಾಕ್ಷ್ಯವನ್ನು ಒದಗಿಸಲಾಗಿತ್ತು.

ಅಂತಿಮ ವಿಚಾರಣೆ ನಡೆಸಿದ ನ್ಯಾಯಾಧೀಶೆ ಮರ್ಯಮ್ ಹೆಂಬ್ರಾಮ್ ಅವರು ಸಚಿವೆ ಅನ್ನಪೂರ್ಣ ದೇವಿ ಅವರನ್ನು ದೋಷಿ ಎಂದು ಘೋಷಿಸಿ, 200 ರೂ. ದಂಡ ವಿಧಿಸಿದ್ದಾರೆ. ಈ ದಂಡ ಕಟ್ಟದಿದ್ದಲ್ಲಿ ಒಂದು ದಿನ ಸಾದಾ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅನ್ನಪೂರ್ಣ ದೇವಿ ಪರ ವಕೀಲ ನವೀಶ್ ಸಿನ್ಹಾ, ಈ ನಿರ್ಧಾರವನ್ನು ಸೆಷನ್​ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಅನ್ನಪೂರ್ಣ ದೇವಿ ಜಾರ್ಖಂಡ್ ಆರ್‌ಜೆಡಿಯಲ್ಲಿ ಪ್ರಭಾವಿ ನಾಯಕಿಯಾಗಿದ್ದರು. ಆರ್‌ಜೆಡಿಯ ರಾಜ್ಯಾಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದರು. ಲಾಲು ಪ್ರಸಾದ್ ಅವರಿಗೂ ತುಂಬಾ ನಿಷ್ಠರಾಗಿದ್ದರು.

ಆದರೆ, 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರು ಬಿಜೆಪಿ ಸೇರಿದ್ದರು. ನಂತರ ಪಕ್ಷ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಿತ್ತು. ಅಷ್ಟೇ ಅಲ್ಲ, ಪ್ರಧಾನಿ ಮೋದಿ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.

ಇದನ್ನೂ ಓದಿ:ರಾಹುಲ್ ಗಾಂಧಿಗೆ ಶಿಕ್ಷೆ ವಿಚಾರ: ನಾಳೆ ಗುಜರಾತ್​ ಹೈಕೋರ್ಟ್​ನಲ್ಲಿ ವಿಚಾರಣೆ

ದಂಪತಿಗೆ ಜೀವಾವಧಿ ಶಿಕ್ಷೆ: ಮತ್ತೊಂದೆಡೆ,ಐದು ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಶವವನ್ನು ಬಚ್ಚಿಟ್ಟಿದ್ದ ಪ್ರಕರಣದಲ್ಲಿ ದಂಪತಿಗೆ ಜಾರ್ಖಂಡ್‌ನ ಚೈಬಾಸಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ, ಅಪರಾಧಿ ಗಂಡ-ಹೆಂಡತಿಗೆ ಹತ್ತು ಸಾವಿರ ರೂಪಾಯಿ ದಂಡ ಹಾಕಿ ನ್ಯಾಯಾಲಯ ಆದೇಶಿಸಿದೆ.

ಬಾನು ಮಿಂಜ್ ಮತ್ತು ಆತನ ಪತ್ನಿ ಶಾಂತಿ ಎಂಬುವವರೇ ಈ ಶಿಕ್ಷೆಗೆ ಗುರಿಯಾಗಿದ್ದು, ಚೈಬಾಸಾ ಪ್ರಧಾನ ಜಿಲ್ಲಾ ಮತ್ತು ಸೆಷನ್​ ನ್ಯಾಯಾಲಯ ತೀರ್ಪು ನೀಡಿದೆ. 2018ರ ಫೆಬ್ರವರಿ 22ರಂದು ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಆನಂದ್‌ಪುರ ಪ್ರದೇಶದ ರುಂಧಿಕೋಚಾ ಗ್ರಾಮದಲ್ಲಿ ರಮೇಶ್ ಟಿರ್ಕಿ ಎಂಬುವರ ಕೊಲೆಯಾಗಿತ್ತು.

ರಮೇಶ್ ತಲೆಗೆ ಶಾಂತಿ ಲಾಗ್‌ನಿಂದ ಹೊಡೆದಿದ್ದರು. ಇದರಿಂದ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ಬಾನು ಮಿಂಜ್ ಮನೆಗೆ ಹಿಂದಿರುಗಿದಾಗ ಪತಿ - ಪತ್ನಿ ಸೇರಿಕೊಂಡು ಶವವನ್ನು ಗಣಿಯೊಂದರಲ್ಲಿ ಎಸೆದು ಎರಡು ದಿನಗಳ ನಂತರ ಗುಜರಾತ್‌ನ ಸೂರತ್‌ಗೆ ಪರಾರಿಯಾಗಿದ್ದರು. ಬಳಿಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಅಲ್ಲದೇ, ಈ ಪ್ರಕರಣದಲ್ಲಿ ಇಬ್ಬರ ವಿರುದ್ಧ ಚಾರ್ಜ್ ಶೀಟ್​ ಸಲ್ಲಿಸಿದ್ದರು.

ABOUT THE AUTHOR

...view details